ಇಂದೋರ್ : 40ರ ಹರೆಯದ ಪ್ರಂಜಲ್ ದುಬೆ ತನ್ನ ಮಹೋನ್ನತ ಕನಸನ್ನು ಯಶಸ್ವಿಯಾಗಿ ಬೆನ್ನಟ್ಟಿ ಬಂದ ದೃಢ ಸಂಕಲ್ಪದ ಅಸಾಮಾನ್ಯ ಟೆಕ್ಕಿ ಎಂದು ಹೇಳಬಹುದು. ಜರ್ಮನಿಯ ಬಹು ರಾಷ್ಟ್ರೀಯ ಸಾಫ್ಟ್ ವೇರ್ ಕಂಪೆನಿಯಾಗಿರುವ ಸ್ಯಾಪ್ ಎಸ್ ಇ ಸಂಸ್ಥೆಯಲ್ಲಿ, ಬೆಂಗಳೂರಿನಲ್ಲಿ, ತನಗಿದ್ದ ಕೈತುಂಬ ಸಂಬಳ ತರುವ ಉದ್ಯೋಗವನ್ನು ತೊರೆದದ್ದು ಮಾತ್ರವಲ್ಲದೆ ಸ್ವಂತ ಮನೆಯನ್ನು ಕೂಡ ಮಾರಿ ತನ್ನ ಪೂರ್ವಜರ ಹುಟ್ಟೂರಾದ ದೇವಾಸ್ ಜಿಲ್ಲೆಯ ಸಂದಾಲ್‌ಪುರ ಗ್ರಾಮದ ತರುಣರ ಭಾಗ್ಯೋದಯಕ್ಕಾಗಿ ಶ್ರಮಿಸಲು ತನ್ನನ್ನು ಮುಡಿಪಾಗಿಟ್ಟವರು.
ತನ್ನ ಹುಟ್ಟೂರಿನ ಯುವಕರು ತನ್ನಂತೆ ಚೆನ್ನಾಗಿ ಉನ್ನತ ಶಿಕ್ಷಣ ಪಡೆದು ನಗರದ ಯುವಕರಿಗೆ ಸರಿಸಮನಾಗಿ ಉದ್ಯೋಗ ರಂಗದಲ್ಲಿ ಯಶಸ್ಸಿನ ಉತ್ತುಂಗ ಶಿಖರಕ್ಕೇರುವಂತೆ ಮಾಡಬೇಕೆಂಬ ಕನಸನ್ನು ನನಸುಗೊಳಿಸಿರುವ ಅಸಾಮಾನ್ಯ ಟೆಕ್ಕಿ ಪ್ರಂಜಲ್ ದುಬೆ.
ದುಬೆ ಬೆಂಗಳೂರಿನಲ್ಲಿನ ತನ್ನ ಉದ್ಯೋಗ ತೊರೆದು, ಸ್ವಂತ ಮನೆಯನ್ನು ಮಾರಿ ಹಳ್ಳಿಗೆ ಬಂದದ್ದು ಆತನ ಹೆತ್ತವರಿಗೆ, ಮಡದಿಗೆ ವಿಚಿತ್ರವಾಗಿ ಕಂಡಿತ್ತು. ಆತನ ಕನಸು ಏನೆಂಬುದನ್ನು ಸ್ಪಷ್ಟವಾಗಿ ಅರಿಯಲು ಅವರಿಗೆ ಕನಿಷ್ಠ ಎರಡು ವರ್ಷಗಳೇ ಹಿಡಿದವು. ಆದರೂ ಪ್ರಂಜಲ್ ತನ್ನ ದೃಢ ಸಂಕಲ್ಪದಿಂದ ಒಂದಿಂಚೂ ಹಿಂದೆ ಸರಿಯದೆ ತನ್ನ ಹಳ್ಳಿಯ ಯುವಕರ ಏಳ್ಗೆಗಾಗಿ ತನ್ನ ಕನಸಿನ ಯೋಜನೆಯನ್ನು ಸಾಕಾರಗೊಳಿಸುತ್ತಲೇ ಸಾಗಿದರು.
ತನ್ನ ಹಳ್ಳಿಯ ಯುವಕರ ಅಭ್ಯುದಯಕ್ಕಾಗಿ ಸಂತಾಲ್‌ಪುರದಲ್ಲಿ ಸಂತ ಸಿಂಗಾಜಿ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸ್ಥಾಪಿಸಿದ ಪ್ರಂಜಲ್, 2010ರಲ್ಲಿ ಮೊದಲ ಬ್ಯಾಚ್ ಆರಂಭಿಸಿದರು.
50 ಹುಡುಗರನ್ನು ಕಟ್ಟಿಕೊಂಡು, ಅವರಲ್ಲಿ ಬಾನೆತ್ತರದ ಕನಸುಗಳನ್ನು ಕಟ್ಟಲು, ಪ್ರಂಜಲ್ ತನ್ನ ತಂಡದವರನ್ನು ಬೆಂಗಳೂರಿಗೆ ಕರೆತಂದು ಇಲ್ಲಿನ ಇನ್‌ಫೋಸಿಸ್, ಬಯೋಕಾನ್, ಸ್ಯಾಪ್ ಮುಂತಾಗಿ ವಿಶ್ವ ದರ್ಜೆಯ ಕಂಪೆನಿಗಳು ಹೇಗೆ ಕಾರ್ಯವೆಸಗುತ್ತವೆ; ಅಲ್ಲಿನ ಟೆಕ್ಕಿಗಳ ಕಾರ್ಯ ನಿರ್ವಹಣೆ ಹೇಗಿರುತ್ತದೆ ಎಂಬಿತ್ಯಾದಿ ಸಂಗತಿಗಳನ್ನು ಅವರಿಗೆ ಪ್ರತ್ಯಕ್ಷ ದರ್ಶನ ಮಾಡಿಸಿದರು.
ತನ್ನ ಹಳ್ಳಿಯ ಹುಡುಗಿಯರನ್ನು ಉನ್ನತ ಶಿಕ್ಷಣಕ್ಕೆ ಹಚ್ಚುವುದು ಎಷ್ಟು ಕಷ್ಟದ ಕೆಲಸ ಎಂಬುದನ್ನು ಪ್ರಂಜಾಲ್ ಕಂಡುಕೊಂಡರು. ಹುಡುಗಿಯರ ಹೆತ್ತವರಿಗೆ ಅವರ ಮಗಳ ಸುರಕ್ಷೆ ಮತ್ತು ಭದ್ರತೆಯ ಬಗ್ಗೆ ಭರವಸೆ ನೀಡುವುದೇ ಬಹುದೊಡ್ಡ ಕಷ್ಟದ ಕೆಲಸವಾಯಿತೆಂದು ಪ್ರಂಜಾಲ್ ಹೇಳುತ್ತಾರೆ.
ಈಗ ಆರು ವರ್ಷಗಳ ಕಠಿನ ಪರಿಶ್ರಮದ ಫಲವಾಗಿ ಪ್ರಂಜಲ್ ದುಬೆ ಅವರ ಸಂತಾಲ್‌ಪುರ ಇನ್‌ಸ್ಟಿಟ್ಯೂಟಿನ ಹಲವು ವಿದ್ಯಾರ್ಥಿಗಳು ಅನೇಕ ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಉತ್ತಮ ಉದ್ಯೋಗ ಪಡೆದಿದ್ದಾರೆ; ಕೈತುಂಬ ಸಂಬಳ ಪಡೆಯುತ್ತಿದ್ದಾರೆ. “ನನ್ನ ಹಳ್ಳಿಯ ಮಕ್ಕಳಾದ ಇವರ ಉನ್ನತ ಶಿಕ್ಷಣ ಮತ್ತು ಆರ್ಥಿಕ ಅಭ್ಯುದಯಕ್ಕಾಗಿ ನನ್ನಿಂದ ಕಿಂಚಿತ್ತಾದರೂ ಮಾಡಲು ಸಾಧ್ಯವಾಯಿತಲ್ಲ ಎಂಬ ಬಗ್ಗೆ ನನಗೆ ಅತೀವವಾದ ಸಂತಸ ಮತ್ತು ಆತ್ಮ ತೃಪ್ತಿ ಇದೆ’ ಎನ್ನುತ್ತಾರೆ ಪ್ರಂಜಲ್, ಪ್ರಾಂಜಲ ಮನೋಭಾವದಿಂದ !
ಇಂದು ಸಂತಾಲ್‌ಪುರದಲ್ಲಿನ ಪ್ರಂಜಾಲ್ ದುಬೆ ಅವರ ಸಂತ ಸಿಂಗಾಜಿ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ವಿದ್ಯಾಸಂಸ್ಥೆ ಸಂತಾಲ್‌ಪುರದ ಆಸುಪಾಸಿನ ಅನೇಕ ಜಿಲ್ಲೆಗಳ ಸುಮಾರು 200 ಗ್ರಾಮಗಳನ್ನು ಒಳಗೊಂಡಂತೆ 1,000 ವಿದ್ಯಾರ್ಥಿಗಳನ್ನು ಹೊಂದಿದೆ. “ವಿದ್ಯಾರ್ಥಿಗಳಿಗೆ ಡಿಗ್ರಿ ಸರ್ಟಿಫಿಕೇಟ್‌ಗಿಂತಲೂ ಅನುಭವದಿಂದ ಸಿಗುವ ಜ್ಞಾನವೇ ಮುಖ್ಯ. ಅದಕ್ಕಾಗಿ ನಾವು ಅವರ ಪ್ರಾಯೋಗಿಕ ಜ್ಞಾನ, ತಿಳಿವಳಿಕೆಗೆ ಆದ್ಯತೆ ನೀಡುತ್ತೇವೆ’ ಎನ್ನುತ್ತಾರೆ ಪ್ರಂಜಲ್.
ಪ್ರಂಜಲ್ ಅವರ ಈ ಪರಿಶ್ರಮಕ್ಕೆ ಅವರ ತಾಯಿ 61ರ ಹರೆಯದ ಕಲ್ಪನಾ ದುಬೆ ಮತ್ತು ಪತ್ನಿ 37ರ ಹರೆಯದ ಅಮಿತಾ ದುಬೆ ಅವರ ಪೂರ್ಣ ಬೆಂಬಲ ಹಾಗೂ ದುಡಿಮೆಯ ಬಲ ಇದೆ.
“ನನ್ನ ಹುಟ್ಟೂರ ಮಕ್ಕಳ ಅಭ್ಯುದಯಕ್ಕಾಗಿ ನಾನು ಏನನ್ನಾದರೂ ಮಾಡಬೇಕು ಎಂಬ ಅತ್ಯಾಸೆ ನನಗಿತ್ತು. ಆದರೆ ಅದಕ್ಕಾಗಿ ಕೈತುಂಬಾ ಸಂಬಳ ಬರುತ್ತಿದ್ದ ನನ್ನ ಉದ್ಯೋಗ ಮತ್ತು ನಾನು ಹೊಂದಿದ್ದ ಸ್ವಂತ ಮನೆಯನ್ನು ತೊರೆದು ಊರಿಗೆ ಮರಳುವ ಅತ್ಯಂತ ಕಷ್ಟಕರ ನಿರ್ಧಾರವನ್ನು ನಾನು ತೆಗೆದುಕೊಳ್ಳಲೇಬೇಕಿತ್ತು. ನಾವೆಲ್ಲರೂ ಜೀವನದ ಒಂದಲ್ಲ ಒಂದು ಹಂತದಲ್ಲಿ ಇತರರಿಗಾಗಿ ಕಷ್ಟಕರ ನಿರ್ಧಾರ ಕೈಗೊಳ್ಳಲೇ ಬೇಕಾಗುತ್ತದೆ. ಇವತ್ತು ನನಗೆ ಆ ನಿರ್ಧಾರದ ಬಗ್ಗೆ ಹೆಮ್ಮೆ ಇದೆ, ಆತ್ಮತೃಪ್ತಿ ಇದೆ; ಛಲದಿಂದ ಮಾಡಿದ ಸಾಧನೆಯ ಬಗ್ಗೆ ಸಂತಸವಿದೆ’ ಎಂದು ಪ್ರಂಜಲ್ ದುಬೆ ಹೇಳುತ್ತಾರೆ.
-ಉದಯವಾಣಿ
Comments are closed.