ತ್ರಿಪುರ: ರಾಜ್ಯದಲ್ಲಿ 15 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಪರಿಣಾಮವಾಗಿ ಲೀಟರ್ ಪೆಟ್ರೋಲ್ ಬೆಲೆ 300 ರೂ.ಗೆ ಏರಿದೆ. ಇದರ ಜೊತೆಜೊತೆಗೇ ಡೀಸೆಲ್ ಬೆಲೆಯೂ 150 ರೂ.ದಾಟಿದೆ.
ಎಡಬಿಡದ ಮಳೆ ಕಾರಣ ರಸ್ತೆ ಸಂಚಾರ ಅಸ್ಸಾಂನ ಹಲವೆಡೆ ಬಂದ್ ಆಗಿದೆ. ಈ ಕಾರಣ ಇಂಧನ ಟ್ಯಾಂಕರ್ಗಳು ಸಾಗುವುದೇ ದುಸ್ತರವಾಗಿದೆ. ಪ್ರತಿಕೂಲ ಪರಿಸ್ಥಿತಿಯಿಂದ ಟ್ಯಾಂಕರ್ಗಳು ಮಾರ್ಗ ಮಧ್ಯೆಯೇ ನಿಂತಿದ್ದರಿಂದ ತ್ರಿಪುರಾದ ನಿತ್ಯದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಡೀಸೆಲ್, ಪೆಟ್ರೋಲ್ ಬೆಲೆ ಗಗನಕ್ಕೆ ಮುಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಹೆದ್ದಾರಿ ಬಂದ್: ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಉಂಟಾಗಿರುವ ಭೂಕುಸಿತ, ರಸ್ತೆ ಗುಂಡಿ, ಮುರಿದುಬಿದ್ದ ಸೇತುವೆಗಳಿಂದ ಸಂಚಾರಕ್ಕೆ ತೀವ್ರ ಅಡಚಣೆ ಯಾಗಿದೆ. ಇದರಿಂದ ಪ್ರಮುಖ ನಗರಗಳೊಂದಿಗೆ ತ್ರಿಪುರಾ ಸಂಪರ್ಕ ಕಳೆದುಕೊಂಡಿದೆ. ಮಾರ್ಗದ ಉದ್ದಕ್ಕೂ ಇಂಧನ ಮತ್ತು ಮೂಲಭೂತ ವಸ್ತುಗಳ ಸಾಗಣೆಯ ಟ್ಯಾಂಕರ್, ಟ್ರಕ್ಗಳು ಸಾಲುಗಟ್ಟಿ ನಿಂತಿವೆ. ಹಾಗಾಗಿ ರಾಜ್ಯದಲ್ಲಿ ಪೆಟ್ರೋಲ್ ಜೊತೆಗೆ ಅಗತ್ಯ ವಸ್ತುಗಳ ಪೂರೈಕೆಗೆ ತೀವ್ರ ಅಡಚಣೆಯಾಗಿದೆ. ಸಹಜವಾಗಿಯೇ ವಿವಿಧ ವಸ್ತುಗಳ ಅಭಾವ ಉಂಟಾಗಿದ್ದು, ಬೆಲೆ ಬಿಸಿ ಮುಟ್ಟಿಸುವಂತಾಗಿದೆ.
ಕಾಮಗಾರಿಗೂ ಬಿಡುವು ಕೊಡದ ವರುಣ:
ಮಳೆ ಕಾರಣ ಹೆದ್ದಾರಿ ಮತ್ತು ಗಡಿ ಭಾಗದ ರಸ್ತೆಗಳ ದುರಸ್ತಿ ಕಾಮಗಾರಿ ಅತೀವ ದುಸ್ತರವಾಗಿದೆ. ಮಳೆ ಬಿಡುವು ಕೊಡುವ ತನಕ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.