ನವದೆಹಲಿ: 3 ತಿಂಗಳಿಂದ ನಾಪತ್ತೆಯಾಗಿರುವ ಖ್ಯಾತ ಹುಲಿ ‘ಜೈ’ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ಹುಲಿ ಹುಡುಕಾಟ ನಡೆಸಿರುವ ಮಹಾರಾಷ್ಟ್ರ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯದ ಹಿಟ್ ಚಿತ್ರ ಶೋಲೆಯಲ್ಲಿ ಅಮಿತಾಭ್ಗೆ ಇರಿಸಿದ್ದ ಹೆಸರನ್ನು ಈ ಹುಲಿಗೆ ನೀಡಲಾಗಿತ್ತು. 7 ವರ್ಷ ಪ್ರಾಯದ ಹುಲಿ ಜೈ ಏಪ್ರಿಲ್ 1 ರ ನಂತರ ಮಹಾರಾಷ್ಟ್ರದ ನಾಗಪುರ ಸಮೀಪದ ಉಮ್ರೆದ್ ಕರಹಂಡ್ಲ ಅಭಯಾರಣ್ಯದಿಂದ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು.
ಮಹಾರಾಷ್ಟ್ರ ಅರಣ್ಯಾಧಿಕಾರಿಗಳು ಜೈಗಾಗಿ ದಕ್ಷಿಣ ರಾಜ್ಯಗಳಲ್ಲಿ ಭಾರಿ ಹುಡುಕಾಟ ನಡೆಸಿದ್ದರು. ಆದರೂ ಹುಲಿಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಶುಕ್ರವಾರ ‘ವಿಶ್ವ ಹುಲಿ ದಿನಾಚರಣೆ’ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದು ಹೋದ ಹುಲಿಗಾಗಿ ಅಭಯಾರಣ್ಯದ ಸಿಬ್ಬಂದಿ ನೆನೆದಿದ್ದಾರೆ. ಎಲೆಕ್ಟ್ರಾನಿಕ್ ಟ್ರಾನ್ಸ್ಮಿಟರ್ ಕೊರಳಲ್ಲಿದ್ದರೂ ಅದು ಕಾರ್ಯ ನಿರ್ವಹಿಸದಿರುವುದು ಅಧಿಕಾರಿಗಳಿಗೆ ಹುಲಿಯ ಜೀವಿತಾವಧಿ ಮೇಲೆ ಶಂಕೆ ಹುಟ್ಟಿಸಿದೆ.
ಜೈ ನ ಸುಳಿವು ನೀಡಿದವರಿಗೆ ಮಹಾರಾಷ್ಟ್ರ ಸರ್ಕಾರ 50 ಸಾವಿರ ನಗದು ಬಹುಮಾನ ಘೋಷಿಸಿದೆ. ಹುಲಿಯ ಹುಡುಕಾಟ ನಡೆಸಿರುವ ಸುತ್ತಮುತ್ತಲ ಗ್ರಾಮಸ್ಥರು ಪ್ರಶಸ್ತಿ ಮೊತ್ತಕ್ಕಾಗಿ ಹಾತೊರೆಯುತ್ತಿದ್ದಾರೆ.
Comments are closed.