ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಉಗ್ರರಿಂದ ಪ್ರಾಣ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನದಂದು ದಿಲ್ಲಿಯ ಕೆಂಪು ಕೋಟೆಯಿಂದ ‘ಬುಲೆಟ್ ಪ್ರೂಫ್ ಆವರಣ’ದೊಳಗೆ ಭಾಷಣ ಮಾಡುವಂತೆ ಗುಪ್ತಚರ ಇಲಾಖೆ ಕೇಳಿಕೊಂಡಿದೆ.
ಈ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರೊಂದಿಗೆ ಭದ್ರತಾ ಸಂಸ್ಥೆಗಳು ಉನ್ನತ ಮಟ್ಟದ ಮಾತುಕತೆ ನಡೆಸಿದ್ದು ಪ್ರಧಾನಿ ಮೋದಿಗೆ ಬುಲೆಟ್ ಪ್ರೂಫ್ ಆವರಣದೊಳಗಿಂದ ಸ್ವಾತಂತ್ರ್ಯ ದಿನದಂದು ಭಾಷಣ ಮಾಡುವಂತೆ ಗುಪ್ತಚರ ಇಲಾಖೆ ಮತ್ತು ಪ್ರಧಾನಿಯವರ ವಿಶೇಷ ರಕ್ಷಣಾ ಸಮೂಹ ಸಲಹೆ ನೀಡಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಕಳೆದೆರಡು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಬುಲೆಟ್ ಪ್ರೂಫ್ ಬಳಸದೆಯೇ ದೆಹಲಿಯ ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದಂದು ಭಾಷಣ ಮಾಡಿದ್ದರು. ಆದರೆ ಈ ಬಾರಿ ಉಗ್ರರಿಂದ ಪ್ರಾಣ ಬೆದರಿಕೆ ಇರುವ ಹಿನ್ನಲೆಯಲ್ಲಿ ಮೋದಿಯವರು ಈ ಸಲಹೆಯನ್ನು ತಿರಸ್ಕರಿಸಲ್ಲ ಎಂಬುವುದಾಗಿ ತಿಳಿದುಬಂದಿದೆ.
ಪ್ರಧಾನಿಯವರು ಕೆಂಪು ಕೋಟೆಯ ಮೇಲಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ಅವರನ್ನು ಗುರಿಯಾಗಿಸಿಕೊಂಡು ಉಗ್ರರು ಡ್ರೋನ್ ದಾಳಿ ಎಸಗುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಉಗ್ರ ಸಂಘಟನೆಗಳು ಪರಸ್ಪರ ದೂರವಾಣಿ ಸಂಪರ್ಕದಲ್ಲಿ ಚರ್ಚೆ ನಡೆಸಿದ್ದು, ತಾವು ಕದ್ದಾಲಿಸಿರುವುದಾಗಿ ಗುಪ್ತಚರ ಇಲಾಖೆ ತಿಳಿಸಿದೆ. ಹೀಗಾಗಿ ಆ. 15ರಂದು ಪ್ರಧಾನಿಗೆ ಎರಡು ಪಟ್ಟು ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುವುದು ಎಂಬುವುದಾಗಿ ವರದಿಯಾಗಿದೆ.
Comments are closed.