ರಾಷ್ಟ್ರೀಯ

ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿಲ್ಲ: ಸ್ವಾತಿ ಮಾಲಿವಾಲ್

Pinterest LinkedIn Tumblr

swati-maliwalನವದೆಹಲಿ: 14 ವರ್ಷದ ಅತ್ಯಾಚಾರ ಸಂತ್ರಸ್ತ ದಲಿತ ಬಾಲಕಿಯ ಹೆಸರು ಬಹಿರಂಗಪಡಿಸಿದ ಆರೋಪವನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಗುರುವಾರ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಉತ್ತರ ದೆಹಲಿಯ ಬುರಾರಿ ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಗೊಳಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಆಧಾರ ರಹಿತ. ನಾನು ಯಾವತ್ತೂ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿಲ್ಲ ಎಂದು ಹೇಳಿದ್ದಾರೆ.

ನಾನು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು, ನನ್ನ ಕರ್ತವ್ಯ ಏನು ಅಂತ ಚೆನ್ನಾಗಿ ಗೊತ್ತು ಮತ್ತು ನಾನು ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿಲ್ಲ ಎಂದು ಸ್ವಾತಿ ಮಾಲಿವಾಲ್ ಅವರು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಲ್ಲದೆ ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಸಂಪೂರ್ಣ ಆಧಾರ ರಹಿತ ಮತ್ತು ದೊಡ್ಡ ತಪ್ಪು ಎಂದಿದ್ದಾರೆ.

ದಲಿತ ಬಾಲಕಿಯನ್ನು ಆಕೆಯ ನೆರೆಮನೆಯಾತ ಅಪಹರಣ ಮಾಡಿ ಅತ್ಯಾಚಾರ ಎಸಗಿದ್ದ. ಕಳೆದ ಡಿಸೆಂಬರ್ನಲ್ಲೂ ಸಹ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆ ನಂತರ ಆತನನ್ನು ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ಮತ್ತೊಮ್ಮೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.

ಈ ಪ್ರಕರಣ ಕುರಿತು ದೆಹಲಿ ಮಹಿಳಾ ಆಯೋಗ ಪೊಲೀಸರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಜತೆಗೆ ಸ್ವಾತಿ ಮಾಲಿವಾಲ್ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಮತ್ತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಟ್ವಿಟರ್ನಲ್ಲಿ ಸಮರ ಸಾರಿದ್ದರು. ಆದರೆ ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಗೊಳಿಸಿದ್ದಾರೆ ಎಂದು ಆರೋಪಿಸಿ ಸ್ವಾತಿ ವಿರುದ್ಧವೇ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದರು.

Comments are closed.