ನವದೆಹಲಿ: ರಿಯೋ ಒಲಿಂಪಿಕ್ಸ್’ಗೆ ಅರ್ಹತೆ ಪಡೆದಿದ್ದ ನರಸಿಂಗ್ ಯಾದವ್ ಅವರು ಉದ್ದೀಪನ ಪತ್ತೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಇದರೊಂದಿಗೆ ಅವರ ಒಲಿಂಪಿಕ್ಸ್ ಕನಸು ಭಗ್ನವಾದಂತಾಗಿದೆ. ಜುಲೈ 5ರಂದು ಸೋನೆಪತ್’ನಲ್ಲಿ ಡೋಪ್ ಟೆಸ್ಟ್ ಕೈಗೊಂಡಿತ್ತು. 74 ಕಿಲೋ ತೂಕ ವಿಭಾಗದ ಕುಸ್ತಿಪಟು ನರಸಿಂಗ್ ಅವರ ‘ಎ’ ಸ್ಯಾಂಪಲ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಬಳಿಕ ಮತ್ತೊಮ್ಮೆ ಅವರನ್ನು ಕರೆಸಿ ‘ಬಿ’ ಸ್ಯಾಂಪಲ್ ಪರೀಕ್ಷೆ ನಡೆಸಲಾಯಿತು. ಆದರೆ, ನರಸಿಂಗ್ ಅದರಲ್ಲೂ ವಿಫಲರಾದರೆಂದು ಮೂಲಗಳು ತಿಳಿಸಿವೆ. ಈ ಎರಡು ಪರೀಕ್ಷೆಗಳ ಬಳಿಕ ನಾಡಾ ತನ್ನ ಅಂತಿಮ ವರದಿಯನ್ನು ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯೂಎಫ್’ಐ)ಕ್ಕೆ ಕಳೆದ ಶನಿವಾರದಂದು ಸಲ್ಲಿಸಿದೆ.
ಮೂಲಗಳ ಪ್ರಕಾರ, ಕುಸ್ತಿ ಒಕ್ಕೂಟವು ನರಸಿಂಗ್ ಯಾದವ್ ಅವರ ಅಕ್ರೆಡಿಶನ್ ಅನ್ನು ಸದ್ಯದ ಮಟ್ಟಿಗೆ ಹಿಂಪಡೆದುಕೊಂಡಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಒಂದು ವೇಳೆ ನರಸಿಂಗ್ ಯಾದವ್ ಅವರು ಉದ್ದೀಪನ ಮದ್ದು ಸೇವನೆ ಮಾಡಿರುವುದು ದೃಢಪಟ್ಟಿದ್ದೇ ಆದಲ್ಲಿ ಅವರನ್ನು ಕುಸ್ತಿಯಿಂದ ನಿಷೇಧಿಸುವ ಸಾಧ್ಯತೆ ಇದೆ. ಒಲಿಂಪಿಕ್ಸ್’ನಲ್ಲಿ ಭಾಗವಹಿಸುವ ಅರ್ಹತೆಯನ್ನು ಅವರು ಕಳೆದುಕೊಳ್ಳುತ್ತಾರೆ. ಹೀಗಾದಲ್ಲಿ, ಭಾರತದ ಅತ್ಯಂತ ಜನಪ್ರಿಯ ಕುಸ್ತಿಪಟುವಾಗಿರುವ ಸುಶೀಲ್ ಕುಮಾರ್ ಅವರನ್ನು 74 ಕಿಲೋ ವಿಭಾಗದಿಂದ ಒಲಿಂಪಿಕ್ಸ್’ಗೆ ಕಳುಹಿಸುವ ಸಾಧ್ಯತೆ ಇದೆ.
Comments are closed.