ಕೊಚ್ಚಿ: ಶ್ರೀಮಂತ ತಂದೆ ಬಂಗಾರದ ಚಮಚ ಬಾಯಲ್ಲಿ ಇಟ್ಟುಕೊಂಡಿದ್ದ ಮಗನಿಗೆ ಬದುಕಿನ ಪಾಠ ಕಲಿಸುವ ಸಲುವಾಗಿ ಹಳ್ಳಿಗೆ ಅಥವಾ ದೂರದೂರಿಗೆ ಕಳುಹಿಸುವ ಕತೆಯಿರುವ ಸಿನೆಮಾಗಳನ್ನು ನೀವು ನೋಡಿರಬಹುದು. ಇದು ಕೂಡ ಅದೇ ಮಾದರಿಯ ಕತೆ, ಆದರೆ ಸಿನೆಮಾ ಅಲ್ಲ ಬದಲಾಗಿ ನಿಜವಾಗಿ ನಡೆದದ್ದು.
ನೌಕರರಿಗೆ ದೀಪಾವಳಿ ಹಬ್ಬಕ್ಕೆ ಕಾರು, ಮನೆಗಳಂತಹ ದುಬಾರಿ ಉಡುಗೊರೆ ನೀಡಿ ಸುದ್ದಿಯಾಗಿದ್ದ ಗುಜರಾತ್‌ನ ಆಗರ್ಭ ಶ್ರೀಮಂತ ವಜ್ರದ ವ್ಯಾಪಾರಿ ಸಾವಿ ಢೋಲಾಕಿ ಅವರ ಪುತ್ರ ದ್ರವ್ಯ ಢೋಲಾಕಿ ಈ ಕತೆಯ ಹೀರೊ. ಅಮೆರಿಕದಲ್ಲಿ ಎಂಬಿಎ ಕಲಿಯುತ್ತಿರುವ 21 ವರ್ಷದ ದ್ರವ್ಯ ರಜೆಯಲ್ಲಿ ಊರಿಗೆ ಬಂದಾಗ 7,000 ರೂ. ಮತ್ತು ಬರೀ ಮೂರು ಜತೆ ಉಡುಪು ನೀಡಿ ಒಂದು ತಿಂಗಳು ದುಡಿದು ತಿನ್ನು ಎಂದು ಹೇಳಿ ಕಳುಹಿಸಿದರು.
ಎಲ್ಲಿಯೂ ನಾನು ಶ್ರೀಮಂತ ಉದ್ಯಮಿಯ ಮಗ ಎಂದು ಹೇಳಿ ಕೊಳ್ಳಬಾರದು, ಒಂದು ತಿಂಗಳ ಕಾಲ ದುಡಿದು ತಿನ್ನಬೇಕು, ಎಲ್ಲಿಯೂ ಒಂದು ವಾರಕ್ಕಿಂತ ಹೆಚ್ಚು ಕೆಲಸ ಮಾಡಬಾರದು ಹಾಗೂ 7,000 ರೂಪಾಯಿಯನ್ನು ತೀರಾ ತುರ್ತು ಸಂದರ್ಭದಲ್ಲಿ ಮಾತ್ರ ಖರ್ಚು ಮಾಡಬೇಕೆಂಬ ಶರತ್ತು ಇತ್ತು. ಬಡವರು ನೌಕರಿ ಪಡೆಯಲು ಎಷ್ಟು ಕಷ್ಟ ಪಡುತ್ತಾರೆ ಮತ್ತು ಬೆವರಿನ ಬೆಲೆ ಏನು ಎಂದು ಮಗನಿಗೆ ಅರಿವು ಮೂಡಿಸುವುದು ಅವರ ಉದ್ದೇಶವಾಗಿತ್ತು. ಬಡತನದ ಬವಣೆಗಳನ್ನು ಯಾವ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ, ಸ್ವತಃ ನಾವೇ ಅನುಭವಿಸಿ ಅರಿಯಬೇಕು ಎನ್ನುವುದು ಅವರ ನಿಲುವು.
ಅಜ್ಞಾತವಾಸಕ್ಕೆ ಕೇರಳ ಆಯ್ಕೆ
ತಂದೆಯ ಮಾತನ್ನು ಪಾಲಿಸಲು ದ್ರವ್ಯ ಆರಿಸಿಕೊಂಡದ್ದು ಕೊಚ್ಚಿ ನಗರವನ್ನು. ದ್ರವ್ಯನಿಗೆ ಮಲೆಯಾಳ ಬಿಲ್‌ಕುಲ್ ಗೊತ್ತಿಲ್ಲ. ಕೇರಳದಲ್ಲಿ ಹಿಂದಿ ಭಾಷೆ ಅಷ್ಟಾಗಿ ಪ್ರಚಲಿತದಲ್ಲಿಲ್ಲ. ಹೀಗಾಗಿ ಆತ ಕೇರಳ ವನ್ನೇ ಅಜ್ಞಾತವಾಸಕ್ಕೆ ಆರಿಸಿಕೊಂಡ. 71 ದೇಶಗಳಲ್ಲಿ ವಜ್ರದ ಉದ್ಯಮ ಹೊಂದಿರುವ 7,000 ಕೋ. ರೂ. ಮೌಲ್ಯದ ಕಂಪೆನಿಯ ಮಾಲಕನ ಮಗ ಮಾಮೂಲು ಪ್ಯಾಂಟ್ ಶರ್ಟ್ ಮತ್ತು ಚಪ್ಪಲಿ ಧರಿಸಿ ಉದ್ಯೋಗ ಹುಡುಕಿಕೊಂಡು ನಗರದಲ್ಲಿ ಅಲೆದಾಡಿದ.
ಬಡ ರೈತನ ಮಗ!
ಮೊದಲ ಐದು ದಿನ ಯಾವ ಉದ್ಯೋಗವೂ ಸಿಗಲಿಲ್ಲ. 60 ಕಡೆ ನೌಕರಿ ಕೇಳಿ ಇಲ್ಲ ಎಂದು ಹೇಳಿಸಿಕೊಂಡ. ಗುಜರಾತ್‌ನ ಬಡ ರೈತನ ಮಗ, 12ನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ ಎಂದು ಸುಳ್ಳು ಹೇಳಿ ದ್ರವ್ಯ ನೌಕರಿ ಹುಡುಕ ತೊಡಗಿದ. ಕೊನೆಗೆ ಕಾಲ್‌ಸೆಂಟರ್‌ನಲ್ಲಿ ನೌಕರಿ ಸಿಕ್ಕಿತು.
ಒಂದು ವಾರದ ಬಳಿಕ ಇದನ್ನು ಬಿಟ್ಟು ಮೆಕ್‌ಡೊನಾಲ್ಡ್‌ನಲ್ಲಿ ಸೇರಿದ. ಹೀಗೆ ಒಂದು ತಿಂಗಳಲ್ಲಿ ಚಪ್ಪಲಿ ಅಂಗಡಿ, ಮತ್ತು ಬೇಕರಿಯಲ್ಲಿ ದುಡಿದು 4,000 ರೂ. ಸಂಪಾದಿಸಿದ. ಇದರಲ್ಲಿ ನಿತ್ಯ 40 ರೂ. ಊಟಕ್ಕೆ ಮತ್ತು 250 ರೂ. ಹೊಟೇಲ್‌ನಲ್ಲಿ ತಂಗಲು ಖರ್ಚಾಗುತ್ತಿತ್ತು.
ತಂದೆಯ ಶರತ್ತು ಪ್ರಕಾರ ದುಡಿದು ವಾಪಸ್ ಸೂರತ್‌ಗೆ ಹೋದ ಬಳಿಕವೇ ಕೊಚ್ಚಿಯಲ್ಲಿದ್ದವರಿಗೆ ತಮ್ಮ ಜತೆಗೆ ಹೀಗೊಬ್ಬ ಶ್ರೀಮಂತ ನೌಕರಿ ಮಾಡಿದ ವಿಷಯ ತಿಳಿದದ್ದು. ಬದುಕಿನಲ್ಲಿ ತಿರಸ್ಕೃತನಾಗುವುದು ಎಷ್ಟು ಅವಮಾನಕಾರಿ ಎನ್ನುವುದು ನನಗೆ ನೌಕರಿ ಹುಡುಕುವಾಗ ತಿಳಿಯಿತು ಎಂದು ದ್ರವ್ಯ ತನ್ನ ಅನುಭವ ವಿವರಿಸಿದ್ದಾರೆ.
ಒಂದು ತಿಂಗಳಲ್ಲಿ ನಾಲ್ಕು ಕಡೆ ಕೆಲಸ ಮಾಡಿ 4,000 ರೂ. ಸಂಪಾದನೆ
7,000 ರೂ. ತೀರಾ ತುರ್ತು ಸಂದರ್ಭದಲ್ಲಿ ಮಾತ್ರ ಖರ್ಚು ಮಾಡಬಹುದೆಂಬ ಶರತ್ತು
-ಉದಯವಾಣಿ
Comments are closed.