ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ಮುಜಾಫರ್ ವನಿ ಹತ್ಯೆ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ಎದುರಿಸುತ್ತಿರುವ ಕಾಶ್ಮೀರದಲ್ಲಿ ಈಗ ಇನ್ನೊಂದು ಸಾವು ಸಂಭವಿಸಿದೆ. ಸಾವಿನ ಸಂಖ್ಯೆ ಈಗ 17ಕ್ಕೇರಿದ್ದು, ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಓರ್ವ ಪೊಲೀಸ್ ಪೇದೆ ಹತರಾಗಿದ್ದಾರೆ.
ಆಕ್ರೋಶಿತರು ಇಲ್ಲಿನ ಝೇಲಮ್ ನದಿಯಲ್ಲಿ ಪೊಲೀಸ್ ಜೀಪನ್ನು ತಳ್ಳಿ ಬೀಳಿಸಿದ ಪರಿಣಾಮ ಓರ್ವ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾನೆ. ಘಟನೆ ಭಾನುವಾರ ನಡೆದಿದ್ದು, ರಾಜ್ಯದ ಬೇರೆ ಬೇರೆ ಕಡೆ ಕಲ್ಲು ತೂರಾಟವೂ ನಡೆದಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಂ ಮುಫ್ತಿ ಜತೆ ರಾಜನಾಥ್ ಮಾತುಕತೆ
ಪರಿಸ್ಥಿತಿ ತಿಳಿಗೊಳಿಸುವ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದು, ಗೃಹ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಅಗತ್ಯವಾಗಿದ್ದಲ್ಲಿ ಇನ್ನಷ್ಟು ಭದ್ರತಾ ಪಡೆಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.
ಈ ನಡುವೆಯೇ ಶುಕ್ರವಾರ ರದ್ದು ಪಡಿಸಲಾಗಿದ್ದ ಅಮರನಾಥ ಯಾತ್ರೆ ಭಾನುವಾರ ಪುನಾರಂಭಗೊಂಡಿದೆ. ಆದರೆ 10 ಜಿಲ್ಲೆಗಳಲ್ಲಿಯೂ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಕಳೆದೆರಡು ದಿನಗಳಿಂದ ಪ್ರತ್ಯೇಕತಾವಾದಿಗಳ ಗುಂಪು ದಾಂದಲೆ ನಡೆಸಿರುವ ಅನಂತನಾಗ್, ಕುಲ್ಗಾಮ್ ಮತ್ತು ಶೋಪಿಯಾನ್ಗಳಲ್ಲಿ ಕಟ್ಟೆಚ್ಚರ ಮುಂದುವರಿದಿದೆ. ಪೊಲೀಸರು ನೀಡಿರುವ ಮಾಹಿತಿಯಂತೆ ಕಳೆದೆರಡು ದಿನಗಳಲ್ಲಿ ಭದ್ರತಾ ಪಡೆಯ 90ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಹಬೂಬಾ ಮುಫ್ತಿ, ಪರಿಸ್ಥಿತಿ ಹತೋಟಿಗೆ ಬರುತ್ತಿದ್ದು, ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈಗಾಗಲೇ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಸೂಚನೆ ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ.
ಉಗ್ರವಾದಕ್ಕೆ ಇಳಿದು ದಾಳಿಗೆ ಸಂಚು ರೂಪಿಸಿರುವ ಬಗ್ಗೆ ಖಚಿತ ಮಾಹಿತಿ ಇರುವ ಹಿನ್ನೆಲೆಯಲ್ಲಿ ಬುರ್ಹಾನ್ ವನಿಯನ್ನು ಹತ್ಯೆ ಮಾಡಲಾಗಿದೆ. ಆಗಬಹುದಾದ ಅನಾಹುತ ಇದರಿಂದ ತಪ್ಪಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
Comments are closed.