ವಾಷಿಂಗ್ಟನ್: ಅಮೆರಿಕದಿಂದ ಪರಾಭವಗೊಂಡು ನೇಣುಗಂಬಕ್ಕೇರಿದ್ದ ಇರಾಕ್ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ರನ್ನು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ.
ಭಯೋತ್ಪಾದಕರನ್ನು ಹತ್ತಿಕ್ಕುವ ಕಾರ್ಯದಲ್ಲಿ ಸದ್ದಾಂ ಸಾಧಿಸಿದ ಯಶಸ್ಸನ್ನು ಟ್ರಂಪ್ ಪ್ರಶಂಸಿಸಿದ್ದಾರೆ. ಉತ್ತರ ಕರೋಲಿನಾ ರಾಜ್ಯದ ರಾಲೀಜ್ ಎಂಬ ನಗರದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್, ಸದ್ದಾಂಹುಸೇನ್ ಕೆಟ್ಟ ಮನುಷ್ಯ ಇರಬಹುದು. ಆದರೆ, ಭಯೋತ್ಪಾದಕರನ್ನು ಕೊಂದುಹಾಕುವುದರಲ್ಲಿ ಆತ ಸಮರ್ಥ. ಉಗ್ರರ ವಿಷಯದಲ್ಲಿ ಹಕ್ಕುಗಳ ಪ್ರಶ್ನೆ ಆಲಿಸಲಿಲ್ಲ, ಮಾತುಕತೆ ನಡೆಸಲಿಲ್ಲ. ಉಗ್ರರು ಎಂದಾಕ್ಷಣ ಅಲ್ಲಿಗೆ ಮುಗಿಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಈ ಹಿಂದೆಯೂ ಸದ್ದಾಂ ಹುಸೇನ್ ಮೊದಲಾದ ಸರ್ವಾಧಿಕಾರಿಗಳ ಬಗ್ಗೆ ಮೃದು ಧೋರಣೆಯ ಹೇಳಿಕೆಗಳನ್ನು ನೀಡಿದ್ದರು. ಲಿಬಿಯಾದ ಮೊಹಮ್ಮದ್ ಗಡಾಫಿ, ಸದ್ದಾಂ ಹುಸೇನ್ ಮೊದಲಾದ ಸರ್ವಾಧಿಕಾರಿಗಳು ಈಗಲೂ ಅಧಿಕಾರದಲ್ಲಿದ್ದಿದ್ದರೆ ಜಗತ್ತು ನೂರು ಪ್ರತಿಶತ ಚೆನ್ನಾಗಿರುತ್ತಿತ್ತು ಎಂದು ಟ್ರಂಪ್ ಹಿಂದೊಮ್ಮೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಟ್ರಂಪ್ರ ಈ ವಿವಾದಾತ್ಮಕ ಹೇಳಿಕೆಗಳನ್ನು ಬಳಸಿಕೊಂಡು ಟೀಕಾ ಪ್ರಹಾರ ನಡೆಸಿರುವ ಡೆಮಾಕ್ರಟಿಕ್ ಮುಖಂಡರು ಇಂಥ ವ್ಯಕ್ತಿ ಅಧಿಕಾರಕ್ಕೆ ಬಂದರೆ ದೇವರೇ ಗತಿ ಎಂದು ಉದ್ಗರಿಸುತ್ತಿದ್ದಾರೆ.
Comments are closed.