ಹೊಸದಿಲ್ಲಿ : ಢಾಕಾ ಕೆಫೆ ಉಗ್ರ ದಾಳಿಯಲ್ಲಿ 20 ವಿದೇಶೀಯರನ್ನು ಅಮಾನುಷವಾಗಿ ಹತ್ಯೆಗೈಯಲಾದ ಒಂದು ದಿನದ ತರುವಾಯ, ಅಲ್ ಕಾಯಿದಾ ಉಗ್ರ ಸಂಘಟನೆಯು ಯರೋಪ್ ನಲ್ಲಿ ನಡೆಸಲಾದ ರೀತಿಯಲ್ಲಿ “ಒಂಟಿ ತೋಳ ಉಗ್ರ ದಾಳಿ’ಗಳನ್ನು ನಡೆಸುವಂತೆ ಭಾರತೀಯ ಮುಸ್ಲಿಮರನ್ನು ಕೇಳಿಕೊಂಡಿದೆ.
ಭಾರತೀಯ ಉಪಖಂಡದಲ್ಲಿನ ಅಲ್ ಕಾಯಿದಾ ಘಟಕದ (ಎಕ್ಯುಐಸ್) ಮುಖ್ಯಸ್ಥನಾಗಿರುವ ಆಸಿಮ್ ಉಮರ್ ಭಾರತೀಯ ಮುಸ್ಲಿಮರನ್ನು ಭಯೋತ್ಪಾದನೆಗೆ ಪ್ರಚೋದಿಸುವ ಹೇಳಿಕೆ ಹೊರಡಿಸಿದ್ದು ಅದರಲ್ಲಿ ಆತ “ಯುರೋಪ್ ನಲ್ಲಿ ನಡೆಸಲಾಗಿರುವ ಒಂಟಿ ತೋಳ ದಾಳಿಯ ಮಾದರಿಯಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿ ಸರಕಾರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಕೊಲ್ಲುವಂತೆ’ ಕೇಳಿಕೊಂಡಿದ್ದಾನೆ.
ಭಾರತೀಯ ಉಪಖಂಡದಲ್ಲಿನ ಅಲ್ ಕಾಯಿದಾ ಘಟಕವು ಕಳೆದ ಎರಡು ವರ್ಷಗಳಿಂದ ಭಾರತೀಯ ಮುಸ್ಲಿಮರನ್ನು ನೇಮಕಾತಿ ಮಾಡಿಕೊಳ್ಳುವ ಯತ್ನ ನಡೆಸುತ್ತಿದೆ. ಆದರೆ ದೊಡ್ಡ ಮಟ್ಟದ ಉಗ್ರ ದಾಳಿಗಳನ್ನು ನಡೆಸುವಲ್ಲಿ ಅದು ಯಶಸ್ಸು ಕಂಡಿಲ್ಲ.
ಭಾರತೀಯ ಉಪಖಂಡದಲ್ಲಿನ ಅಲ್ ಕಾಯಿದಾ ಸಂಘಟನೆಯನ್ನು ನಾಲ್ಕು ದಿನಗಳ ಹಿಂದಷ್ಟೇ ಅಮೆರಿಕವು “ವಿದೇಶಿ ಭಯೋತ್ಪಾಕದ ಸಂಘಟನೆ’ ಎಂದು ಘೋಷಿಸಿದೆ. ಅದರ ಬೆನ್ನಲ್ಲೇ ಇದೀಗ ಎಕ್ಯುಐಸ್ ಮುಖ್ಯಸ್ಥ ಆಸಿಮ್ ಉಮರ್‌ನಿಂದ ಭಾರತೀಯ ಮುಸ್ಲಿಮರಿಗೆ “ಒಂಟಿ ತೋಳ ಉಗ್ರ ದಾಳಿ’ಗಳನ್ನು ನಡೆಸುವ ಕರೆ ಬಂದಿರುವುದು ಗಮನಾರ್ಹವಾಗಿದೆ.
ಉಗ್ರ ಚಟುವಟಿಕೆಗಳ ಕುರಿತಾಗಿ ವಿಶ್ವಾದ್ಯಂತ ಅಂತರ್ ಜಾಲದಲ್ಲಿ ಕಣ್ಣಿಟ್ಟಿರುವ ಅಮೆರಿಕದ “ಸೈಟ್ ಇಂಟೆಲಿಜೆನ್ಸ್ ಗ್ರೂಪ್’ ಕಲೆಹಾಕಿರುವ ರಹಸ್ಯ ಮಾಹಿತಿಗಳ ಪ್ರಕಾರ ಭಾರತದಲ್ಲಿ ಅಲ್ ಕಾಯಿದಾ ಮತ್ತು ಐಸಿಸ್ ಉಗ್ರ ಸಂಘಟನೆಗಳು ಮುಸ್ಲಿಮರನ್ನು ನೇಮಕ ಮಾಡಿಕೊಳ್ಳುವ ಜಂಟಿ ಪ್ರಯತ್ನದಲ್ಲಿ ತೊಡಗಿವೆ.
-ಉದಯವಾಣಿ
Comments are closed.