ಅಂತರಾಷ್ಟ್ರೀಯ

ನೈಜೀರಿಯಾದಲ್ಲಿ ಇಬ್ಬರು ಭಾರತೀಯರನ್ನು ಅಪಹರಿಸಿದ ಶಂಕಿತ ಉಗ್ರರು

Pinterest LinkedIn Tumblr

nigeria-kidnap

ವಿಶಾಖಪಟ್ಟಣಂ: ಶಂಕಿತ ಉಗ್ರರು ಇಬ್ಬರು ಭಾರತೀಯರನ್ನು ನೈಜೀರಿಯಾದಲ್ಲಿ ಅಪಹರಿಸಿರುವ ಮಾಹಿತಿ ಲಭಿಸಿದೆ. ಉತ್ತರ ಮಧ್ಯ ನೈಜೀರಿಯಾದ ಬೆನ್ಯೂ ಪ್ರಾಂತ್ಯದ ಜಿಬೊಕೋ ಪಟ್ಟಣದಿಂದ ಅಪಹರಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಮಂಗಿಪುಡಿ ಸಾಯ್ ಶ್ರೀನಿವಾಸ್ ಮತ್ತು ಅವರ ಸಹೋದ್ಯೋಗಿ ಅನೀಶ್ ಶರ್ಮ ಅಪಹರಣಕ್ಕೀಡಾದವರು. ಘಟನೆ ಬುಧವಾರ ನಡೆದಿದೆ ಎಂದು ಹೇಳಲಾಗಿದೆ. ಈಗಾಗಲೇ ಶ್ರೀನಿವಾಸ್ ಸಂಬಂಧಿಕರು ಜಿಲ್ಲಾಧಿಕಾರಿ ಎನ್. ಯುವರಾಜ್ ಅವರನ್ನು ಗುರುವಾರ ಸಂರ್ಪಸಿ ಅಪಹರಣಕ್ಕೀಡಾದವರನ್ನು ಬಿಡಿಸಿಕೊಂಡು ಬರಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ ಸಂಜೆ 7.30ರ ಸುಮಾರಿಗೆ ಡ್ಯಾಂಗೋಟ್ ಸೆಮೆಂಟ್ ಕಾರ್ಖಾನೆಯಿಂದ ಮನೆಗೆ ಹಿಂದಿರುಗುವ ವೇಳೆ ಬಂದೂಕುಧಾರಿಗಳ ಗುಂಪು ಕಾರನ್ನು ಅಡ್ಡಗಟ್ಟಿ ಅಪಹರಿಸಿದ್ದಾರೆನ್ನುವ ಮಾಹಿತಿ ಇದೆ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಶ್ರೀನಿವಾಸ್ ಪತ್ನಿ ಎಂ. ಲಲಿತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶ್ರೀನಿವಾಸ್ ಅವರು ಸಿವಿಲ್ ಇಂಜಿನಿಯರ್ ಆಗಿದ್ದು, ಡ್ಯಾಂಗೋಟ್ ಸೆಮೆಂಟ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ರಾಯ್ಪುರದ ಆದಿತ್ಯ ಬಿರ್ಲಾ ಗ್ರೂಪ್ನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಪತಿಯನ್ನು ಸಂರ್ಪಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ ಸಾಧ್ಯವಾಗಲಿಲ್ಲ. ಮಾರನೇದಿನ ಬೆಳಗ್ಗೆ ಕಾರ್ಖಾನೆ ಅಧಿಕಾರಿಗಳನ್ನು ಸಂರ್ಪಸಿದೆ. ಆಗ ಅವರಿಂದ ಅಪಹರಣ ಆಗಿದೆ ಎನ್ನುವ ಮಾಹಿತಿ ಲಭಿಸಿತು ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎನ್. ಯುವರಾಜ್, ಈಗಾಗಲೇ ನೈಜೀರಿಯಾ ಪೊಲೀಸ್ ಅಧಿಕಾರಿಗಳು ಶೋಧಕಾರ್ಯದಲ್ಲಿ ತೊಡಗಿದ್ದಾರೆ. ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನೂ ಸಂರ್ಪಸಿ ಮಾಹಿತಿ ನೀಡಲಾಗಿದೆ. ಘಟನೆಯ ಬಗ್ಗೆ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ.

Comments are closed.