
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಂದು ಹೀನ ಕೃತ್ಯಕ್ಕೆ ಸಾಕ್ಷಿಯಾಗಿದ್ದು, ಖಾಸಗಿ ಶಾಲಾ ಆವರಣದಲ್ಲಿಯೇ 15 ವರ್ಷದ ಬಾಲಕಿಯನ್ನು ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಗೈದಿದ್ದಾರೆ.
ಪೂರ್ವ ದೆಹಲಿಯ ಜಗತ್ ಪುರಿ ಪ್ರದೇಶದಲ್ಲಿರುವ ಖಾಸಗಿ ಶಾಲಾ ಆವರಣದಲ್ಲಿ ಈ ಕುಕೃತ್ಯ ನಡೆದಿದ್ದು, ಶಾಲಾ ಭದ್ರತಾ ಸಿಬ್ಬಂದಿಗಳೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಬಾಲಕಿ ಪೋಷಕರು ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ದೂರು ಬಂದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಶಾಲಾ ಭದ್ರತಾ ಸಿಬ್ಬಂದಿ ಗೋವಿಂದ್ ಮತ್ತು ತ್ಯಾಜ್ಯ ವಸ್ತು ಮಾರಾಟಗಾರ ರಮೇಶ್ ಎಂದು ಗುರುತಿಸಲಾಗಿದೆ. ಪ್ರಸ್ತುತ ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಮತ್ತು ಪೋಸ್ಕೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ.
ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದಿದ್ದ ಗೋವಿಂದ!
ಇನ್ನು ಬಾಲಕಿ ತನ್ನ ದೂರಿನಲ್ಲಿ ಹೇಳಿರುವಂತೆ ಖಾಸಗಿ ಶಾಲೆಯಲ್ಲಿ ಪ್ಯೂನ್ ಕೆಲಸ ಖಾಲಿ ಇದ್ದು, ಆ ಕೆಲಸವನ್ನು ನಿನಗೇ ಕೊಡಿಸುವುದಾಗಿ ಗೋವಿಂದ ನಂಬಿಸಿದ್ದ. ಹೀಗಾಗಿ ನಾನು ಆತನೊಂದಿಗೆ ಶಾಲೆಗೆ ಬಂದಿದ್ದೆ. ಶಾಲೆಗೆ ಬಂದಾಗ ಯಾರು ಇರಲಿಲ್ಲ. ಇದನ್ನು ಪ್ರಶ್ನಿಸಿದಾಗ ಶಾಲೆ ಇಲ್ಲ. ಆದರೆ ಆಫೀಸ್ ರೂಂ ನಲ್ಲಿ ಮೀಟಿಂಗ್ ಇದೆ ಎಂದು ಹೇಳಿ ಒಳಕರೆದೊಯ್ದ. ಬಳಿಕ ಆತನ ಮತ್ತೋರ್ವ ಸ್ನೇಹಿತ ಕೂಡಲೇ ರೂಂ ನ ಬಾಗಿಲು ಹಾಕಿ ತನ್ನ ಮೇಲೆ ಅತ್ಯಾಚಾರ ಗೈದರು. ಬಳಿಕ ಅವರಿಂದ ತಪ್ಪಿಸಿಕೊಂಡು ಬಂದು ಪೋಷಕರಿಗೆ ವಿಷಯ ತಿಳಿಸಿದೆ ಎಂದು ಬಾಲಕಿ ಹೇಳಿದ್ದಾಳೆ. ಶಾಲಾ ಆಡಳಿತ ಮಂಡಳಿ ಹೇಳುವಂತೆ ಬೇಸಿಗೆ ರಜೆ ನಿಮಿತ್ತ ಶಾಲೆಯನ್ನು ಮುಚ್ಚಲಾಗಿತ್ತು ಎಂದು ತಿಳಿದುಬಂದಿದೆ.
Comments are closed.