ಹೊಸದಿಲ್ಲಿ : ಪೈಶಾಚಿಕ ಭಯೋತ್ಪಾದಕ ಕೃತ್ಯಗಳಿಗೆ ಕುಖ್ಯಾತವಾಗಿರುವ ಐಸಿಸ್ ಉಗ್ರ ಸಂಘಟನೆಯ ಖಲೀಫತ್ ಸೈಬರ್ ಆರ್ಮಿ (ಸಿಸಿಎ) ಇದೀಗ 285 ಭಾರತೀಯರನ್ನು, ವಿಶೇಷವಾಗಿ ಭಾರತೀಯ ಸಾಫ್ಟ್ ವೇರ್ ಇಂಜಿನಿಯರ್ ಗಳನ್ನು, ಒಳಗೊಂಡ 4,000 ಮಂದಿಯ ಹತ್ಯಾ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಐಸಿಸ್ ಬಿಡುಗಡೆ ಮಾಡಿರುವ ಈ ಹತ್ಯಾ ಪಟ್ಟಿಯಲ್ಲಿ ಅರ್ಧಾಂಶ ಮಂದಿ ಅಮೆರಿಕನ್ನರು. ಹಾಗೆಯೇ ಬ್ರಿಟನ್, ಫ್ರಾನ್ಸ್, ಮತ್ತು ಕೆನಡದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರ ಹೆಸರಿನೊಂದಿಗೆ ಅವರ ವಿಳಾಸ ಮತ್ತು ಇ-ಮೇಲ್ ಮಾಹಿತಿಯನ್ನೂ ನೀಡಲಾಗಿದೆ.
“ಟೆಲಿಗ್ರಾಂ’ ಎಂಬ ಎನ್‌ಕ್ರಿಪ್‌ಟೆಡ್ ಮೆಸೇಜಿಂಗ್ ಸರ್ವಿಸ್ ಮೂಲಕ ಹ್ಯಾಕರ್ ಸಮೂಹವು ಐಸಿಸ್ ಉಗ್ರರ ಈ ಹತ್ಯಾ ಪಟ್ಟಿಯನ್ನು ವಿತರಿಸಿದೆ.
“ಇಸ್ಲಾಮಿಕ್ ದೇಶದ ತೋಳಗಳೇ, ಇದು ಬಹಳ ಮುಖ್ಯವಾದ ಪಟ್ಟಿಯಾಗಿದೆ; ಇದರಲ್ಲಿ ಇರುವವರನ್ನು ಕೂಡಲೇ ಕೊಲ್ಲಿರಿ’ ಎಂದು ಹ್ಯಾಕರ್ ಗ್ರೂಪ್ ಹೇಳಿರುವುದನ್ನು ಉಲ್ಲೇಖೀಸಿ ಇಂಟರ್‌ನ್ಯಾಶನಲ್ ಬಿಸಿನೆಸ್ ಟೈಮ್ಸ್ ವರದಿ ಮಾಡಿದೆ.
ಇಂಟರ್‌ನೆಟ್‌ನಲ್ಲಿ ಉಗ್ರರು ಹಾಗೂ ಅವರ ಚಟುವಟಿಕೆಗಳನ್ನು ಪತ್ತೆ ಹಚ್ಚಿ ಆ ಕುರಿತ ಮಾಹಿತಿಗಳನ್ನು ಸರಕಾರಕ್ಕೆ ನೀಡುವ ಭಾರತೀಯ ಸಾಫ್ಟ್ ವೇರ್ ಇಂಜಿನಿಯರ್‌ಗಳು ದೊಡ್ಡ ಸಂಖ್ಯೆಯಲ್ಲಿ ಐಸಿಸ್ ಹತ್ಯಾ ಪಟ್ಟಿಯಲ್ಲಿರುವುದು ವಿಶೇಷವಾಗಿದೆ.
-ಉದಯವಾಣಿ
Comments are closed.