ಡೆಹ್ರಾಡೂನ್: 69 ವರ್ಷಗಳ ನಿರಂತರ ಕಾಯುವಿಕೆಯ ನಂತರ ಈ ಊರಿಗೆ ಬಸ್ ಬಂತು. ಅದು ಸಾಧ್ಯವಾಗಿದ್ದು, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಿಂದ. ಹೌದು ಈ ಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸಿದ ನಂತರ ಊರಿನ ಜನರು ಬಸ್ನಲ್ಲಿ ಓಡಾಡುವಂತಾಗಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಸಿಲ್ಪತ ಗ್ರಾಮದ ನಿವಾಸಿಗಳು ಬಸ್ ಬಂದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಈ ಗ್ರಾಮಕ್ಕೆ ರಸ್ತೆ ನಿರ್ಮಿಸಲಾಗಿತ್ತು. ಅದಿ ಬದ್ರಿ ತಾಲೂಕಿನಿಂದ ಸಿಲ್ಪತ ಗ್ರಾಮಕ್ಕೆ 21 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ಪಕ್ಕಾ ರಸ್ತೆಯಾದ ನಂತರ ಈ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಿದೆ.
ಹತ್ತಿರ ಮಾರುಕಟ್ಟೆಗೆ ಹೋಗಲೂ ಸಹ ನಾವು ದಿನವೂ ಹಲವು ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತಿತ್ತು, ಇನ್ನು ಪಟ್ಟಣಗಳಿಗೆ ತೆರಳುವುದು ಇನ್ನೂ ಕಷ್ಟದ ಕೆಲಸವಾಗಿತ್ತು. ಆದರೆ ಸ್ವಾತಂತ್ರ್ಯ ಬಂದ 69 ವರ್ಷಗಳ ನಂತರ ನಮ್ಮ ಕನಸು ನನಸಾಗಿದೆ. ನಮ್ಮ ಊರಿನ ಮುಂದಿನ ತಲೆಮಾರಿನವರು ನಾವು ಅನುಭವಿಸಿದ ಕಷ್ಟ ಅನುಭವಿಸುವ ಅಗತ್ಯವಿಲ್ಲ. ಅವರಿಗೆ ಪಕ್ಕಾ ರಸ್ತೆ ಸಂಪರ್ಕ ಸಿಕ್ಕಿದೆ ಎಂದು ಗ್ರಾಮದ ಕಲಮ್ ಸಿಂಗ್ ಬಿಶ್ತ್ ಸಂತಸ ಹಂಚಿಕೊಳ್ಳುತ್ತಾರೆ.
ಉತ್ತರಾಖಂಡ ರಸ್ತೆ ಸಾರಿಗೆ ನಿಗಮದ ಬಸ್ ಮೊದಲ ಬಾರಿಗೆ ಈ ಊರಿಗೆ ಬಂದಾಗ ಊರಿನ ಜನರು ಸಂತಸದಿಂದ ಸ್ವಾಗತಿಸಿದ್ದಾರೆ. ನಮ್ಮ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ 2 ವರ್ಷದ ಹಿಂದೆಯೇ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ಹಲವು ಬಾರಿ ನಾವು ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ ನಂತರ ನಮ್ಮ ಗ್ರಾಮಕ್ಕೆ ರಸ್ತೆ ನಿರ್ಮಿಸಲಾಯಿತು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.
ಈ ಭಾಗದಲ್ಲಿ ರಸ್ತೆ ನಿರ್ಮಿಸುವುದು ಸವಾಲಿನ ಕೆಲಸವಾಗಿದ್ದ ಕಾರಣ ರಸ್ತೆ ನಿರ್ಮಾಣಕ್ಕೆ ಸ್ವಲ್ಪ ತಡವಾಯಿತು ಎಂದು ರಸ್ತೆ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.