ರಾಷ್ಟ್ರೀಯ

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : 8 ಸಿಆರ್‌ಪಿಎಫ್ ಯೋಧರು ಹುತಾತ್ಮ

Pinterest LinkedIn Tumblr

kashmirಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಬಳಿ ಶನಿವಾರ ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಸಂಘಟನೆಗೆ ಸೇರಿದ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 8 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು, 21 ಯೋಧರು ಗಾಯಗೊಂಡಿದ್ದಾರೆ. ಇದು ಕಳೆದ ಮೂರು ವರ್ಷಗಳಲ್ಲೇ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಘೋರ ದಾಳಿ ಎನ್ನಲಾಗಿದೆ. ಈ ವೇಳೆ ಯೋಧರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರೂ ಹತರಾಗಿದ್ದಾರೆ. ದಾಳಿಯಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಉಗ್ರರು ಪರಾರಿಯಾಗಿದ್ದಾರೆ ಎಂಬ ಸುದ್ದಿ ಇದೆಯಾದರೂ, ಇದು ಖಚಿತಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮತ್ತೂಂದೆಡೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌, ಮಡಿದ ಯೋಧರ ಆತ್ಮಕ್ಕೆ ಕಂಬನಿ ಮಿಡಿದಿದ್ದಾರೆ.

ಗುಂಡಿನ ಸುರಿಮಳೆ: ಶ್ರೀನಗರದಿಂದ 14 ಕಿ.ಮೀ ದೂರದ ಫ್ರೆಸ್ಟ್‌ ಬಾಲ್‌ ಎಂಬಲ್ಲಿ ಶನಿವಾರ ಭೀಕರ ಗುಂಡಿನ ದಾಳಿ ನಡೆಸಿರುವ ಪಾಕ್‌ ಮೂಲದ ಉಗ್ರರು, 8 ಯೋಧರನ್ನು ಹತ್ಯೆ ಮಾಡಿದ್ದಾರೆ. ಸಿಆರ್‌ಪಿಎಫ್ನ 161ನೇ ಬೆಟಾಲಿಯನ್‌ಗೆ ಸೇರಿದ ಬಸ್‌, ಫ್ರೆಸ್ಟ್‌ಬಾಲ್‌ನ ಕಡಿದಾದ ತಿರುವಿನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ವೇಳೆ ಆಯಕಟ್ಟಿನ ಸ್ಥಳದಿಂದ ಏಕಾಏಕಿ ಗುಂಡಿನ ದಾಳಿ ನಡೆಸಿದ ಉಗ್ರರು ಕ್ಷಣಮಾತ್ರದಲ್ಲಿ 8 ಯೋಧರನ್ನು ಬಲಿ ಪಡೆದು, ಇತರೆ 21 ಯೋಧರನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಈ ಏಕಾಏಕಿ ದಾಳಿಯಿಂದ ಚೇತರಿಸಿಕೊಂಡ ಯೋಧರು ಪ್ರತಿ ದಾಳಿ ಇಬ್ಬರನ್ನು ಬಲಿ ಪಡೆದಿದ್ದಾರೆ. ಗಾಯಾಳು ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
-ಉದಯವಾಣಿ

Comments are closed.