ಅಲಹಾಬಾದ್:ಉತ್ತರಪ್ರದೇಶದಾದ್ಯಂತ ಇರುವ 1,200 ರಾಷ್ಟ್ರೀಯ ಸ್ವಯಂಸೇವಕ್ ಸಂಘ(ಆರ್ ಎಸ್ಎಸ್) ಶಾಲೆಗಳಲ್ಲಿ ಸುಮಾರು 7,000 ಸಾವಿರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಕಳೆದ 2 ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದ ಗದ್ದುಗೆ ಏರಿದ ಮೇಲೆ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಶೇ.30ರಷ್ಟು ಏರಿಕೆಯಾಗಿದೆ ಎಂದು ಬಲಪಂಥೀಯ ಸಂಘಟನೆಯಾದ ಆರ್ ಎಸ್ ಎಸ್ ಹೇಳಿಕೊಂಡಿದೆ.
ಹಿಂದೂತ್ವದ ತತ್ವಾದರ್ಶಗಳನ್ನು ಹೊಂದಿರುವ ಆರ್ಎಸ್ಎಸ್ ಪ್ರಕಾರ, ಮುಸ್ಲಿಂ ವಿದ್ಯಾರ್ಥಿಗಳು ಶ್ಲೋಕ ಮತ್ತು ಭೋಜನ ಮಂತ್ರಪಠಣ ಸೇರಿದಂತೆ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅಷ್ಟೇ ಅಲ್ಲ ತುಂಬಾ ಉತ್ತಮವಾಗಿ ವಿದ್ಯಾಭ್ಯಾಸ ಮತ್ತು ಕ್ರೀಡೆಯಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಇದರಲ್ಲಿ ಬಹುತೇಕ ಮಕ್ಕಳು ಗ್ರಾಮೀಣ ಪ್ರದೇಶದವರಾಗಿದ್ದಾರೆ ಎಂದು ತಿಳಿಸಿದೆ.
ಮುಸ್ಲಿಂ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರನ್ನು ಅವರ ಶಾಲೆಯ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆಯಲ್ಲೂ ಹೆಚ್ಚೆಚ್ಚು ಭಾಗವಹಿಸುವಂತೆ ಮಾಡಬೇಕಾಗಿದೆ ಎಂದು ಸರಸ್ವತಿ ಶಿಶು ಮಂದಿರ್ ಮತ್ತು ಸರಸ್ವತಿ ವಿದ್ಯಾ ಮಂದಿರ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಆರ್ ಎಸ್ ಎಸ್ ನೇತೃತ್ವದ ಶಾಲೆ ವಿದ್ಯಾಭಾರತಿ ರಾಜ್ಯ ನಿರೀಕ್ಷಕ ಚಿಂತಾಮಣಿ ಸಿಂಗ್ ಹೇಳುವಂತೆ, ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಅಖಿಬ್, ಅಫ್ತಾಬ್ ಅಲಾಂ, ಇಜಾಜ್ ಅಹ್ಮದ್, ಗುಫ್ರಾನುದ್ದೀನ್ ಮತ್ತು ಮೊಹಮ್ಮದ್ ಅಕ್ರಮ್ ಯುವ ಕಾಮನ್ ವೆಲ್ತ್ ಗೇಮ್ಸ್ ನ ರಾಷ್ಟ್ರೀಯ ಕ್ರೀಡಾ ಪಂದ್ಯದಲ್ಲಿ ಪದಕಗಳನ್ನು ಗೆದ್ದಿರುವುದಾಗಿ ತಿಳಿಸಿದ್ದಾರೆ.
-ಉದಯವಾಣಿ
Comments are closed.