ರಾಷ್ಟ್ರೀಯ

ಬಾಂಬ್‌ ಸಂದೇಶದ ಬ್ಯಾಗ್‌:ಕಾಶ್ಮೀರಿ ಯುವತಿಯರು ದಿಲ್ಲಿ ಪೊಲೀಸರ ವಶಕ್ಕೆ

Pinterest LinkedIn Tumblr

IG AIRPORT-700ಹೊಸದಿಲ್ಲಿ : ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದೇಶೀಯ ನಿರ್ಗಮನ ದ್ವಾರದಿಂದ ಸಾಗುತ್ತಿದ್ದ ಇಬ್ಬರು ಕಾಶ್ಮೀರೀ ಯುವತಿಯರನ್ನು ಸಿಐಎಸ್‌ಎಫ್ ಭದ್ರತಾ ಸಿಬಂದಿಗಳು ತಡೆದು ವಶಕ್ಕೆ ತೆಗೆದುಕೊಂಡ ಪ್ರಕರಣಕ್ಕೆ ಕಾರಣವಾದ ಸಂಗತಿ ವಿಲಕ್ಷಣಕಾರಿಯಾಗಿದೆ.

ಕಾಶ್ಮೀರಿ ಯುವತಿಯರಿಬ್ಬರಲ್ಲಿ ಒಬ್ಬಳ ಕೈಯಲ್ಲಿದ್ದ ಬ್ಯಾಗ್‌ನ ಮೇಲೆ “ಇದರೊಳಗೆ ಬಾಂಬ್‌ ಇರಬಹುದು’ ಎಂಬ ಬರಹ ಕಂಡು ಬಂದದ್ದೇ ಭದ್ರತಾ ಸಿಬಂದಿಗಳು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಕಾರಣವಾಯಿತು !

ಬಾಂಬ್‌ ಶಂಕೆಯ ಕಾರಣಕ್ಕೆ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಈ ಯುವತಿಯರು ಬಾಂಗ್ಲಾದೇಶದಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿನಿಯರಾಗಿದ್ದಾರೆ. ಇವರು ಢಾಕಾದಿಂದ ಕಾಶ್ಮೀರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಇವರನ್ನು ತಡೆದು ತಪಾಸಣೆ ಮಾಡಲಾಯಿತು.

ಯುವತಿಯರಿಬ್ಬರಲ್ಲಿ ಒಬ್ಬಳ ಬ್ಯಾಗ್‌ ಮೇಲೆ “ಇದರಲ್ಲಿ ಬಾಂಬ್‌ ಇರಬಹುದು’ ಎಂಬ ಬರಹದ ಸಂದೇಶವನ್ನು ಕಂಡೊಡನೆಯೇ ಶಂಕಿತರಾದ ಸಿಐಎಸ್‌ಎಫ್ ಭದ್ರತಾ ಸಿಬಂದಿ, ದಿಲ್ಲಿ ಪೊಲೀಸರನ್ನು ಕರೆಸಿಕೊಂಡು ಯುವತಿಯರ ಬ್ಯಾಗನ್ನು ಕೂಲಂಕಷ ತಪಾಸಣೆಗೆ ಗುರಿ ಪಡಿಸಿದರು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಭದ್ರತಾ ತಪಾಸಣೆಯಲ್ಲಿ ಯಾವುದೇ ಶಂಕಾಸ್ಪದ ವಸ್ತುಗಳು ಕಂಡು ಬಾರದ ಕಾರಣ ಯುವತಿಯರನ್ನು ಅವರ ಪಾಡಿಗೆ ಹೋಗಲು ಬಿಡಲಾಯಿತು.

ಹಾಗಿದ್ದರೂ ಅವರು ಶ್ರೀನಗರಕ್ಕೆ ಹೋಗಲು ತಾವು ಏರಬೇಕಿದ್ದ ವಿಮಾನವನ್ನು ಕಳೆದುಕೊಂಡರು, ಪರಿಣಾಮವಾಗಿ ಅವರು ದಿಲ್ಲಿಯಲ್ಲಿನ ತಮ್ಮ ಸೋದರ ಸಂಬಂಧಿಯ ಮನೆಯಲ್ಲಿ ರಾತ್ರಿ ಕಳೆಯಬೇಕಾಯಿತು ಎಂದು ವರದಿ ತಿಳಿಸಿದೆ.
-ಉದಯವಾಣಿ

Comments are closed.