ರಾಷ್ಟ್ರೀಯ

21 ಆಪ್‌ ಶಾಸಕರಿಗೆ ಅನರ್ಹತೆ ಭೀತಿ

Pinterest LinkedIn Tumblr

Arvind-Kejriwal-1-900ಹೊಸದಿಲ್ಲಿ: ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ಲಾಭದಾಯಕ ಹುದ್ದೆಯಿಂದ ಹೊರಗಿಡುವ ದಿಲ್ಲಿ ಸರಕಾರದ ವಿಧೇಯಕವನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ತಿರಸ್ಕರಿಸಿದ್ದಾರೆ. ಇದರಿಂದ ಆಮ್‌ ಆದ್ಮಿ (ಆಪ್‌) ಪಕ್ಷದ 21 ಶಾಸಕರಿಗೆ ಅನರ್ಹತೆ ಭೀತಿ ಎದುರಾಗಿದೆ. ಸಂಸದೀಯ ಕಾರ್ಯದರ್ಶಿಯಂತಹ ಲಾಭದಾಯಕ ಹುದ್ದೆ (ಪ್ರತ್ಯೇಕ ಸಂಬಳ, ಭತ್ಯೆ ಇತ್ಯಾದಿ)ಗೆ ಶಾಸಕರನ್ನು ನೇಮಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಸರಕಾರದ ಕ್ರಮ ಸಂವಿಧಾನಕ್ಕೆ ವಿರುದ್ಧ. ಈ ಶಾಸಕರನ್ನು ಅನರ್ಹಗೊಳಿಸಿ ಎಂದು ರಾಷ್ಟ್ರಪತಿಯವರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರ 1997ರ ದಿಲ್ಲಿ ವಿಧಾನಸಭಾ ಕಾಯ್ದೆ (ಅನರ್ಹತೆ) ಕಾಯ್ದೆಗೆ ತಿದ್ದುಪಡಿ ತಂದು ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ಲಾಭದಾಯಕ ಹುದ್ದೆಯಿಂದ ಹೊರಗಿರಿಸಿತ್ತು. ಬಳಿಕ ರಾಷ್ಟ್ರಪತಿಯವರ ಅನುಮೋದನೆಗೆ ಕಳಿಸಲಾಗಿತ್ತು. ಆದರೆ ಇದಕ್ಕೆ ಸಮ್ಮತಿಸುವುದಕ್ಕೆ ರಾಷ್ಟ್ರಪತಿಯವರು ನಿರಾಕರಿಸಿದ್ದಾರೆ. ಈ ವಿಚಾರವನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದ್ದು, ಶಾಸಕರ ಪ್ರತಿಕ್ರಿಯೆಗಳನ್ನು ಕೇಳುವಂತೆ ಹೇಳಿದ್ದಾರೆ. 21 ಶಾಸಕರು ಅನರ್ಹರಾದರೆ ಆಪ್‌ ಶಾಸಕರ ಸಂಖ್ಯೆ 46ಕ್ಕಿಳಿಯಲಿದೆ. ಆದರೆ ಬಹುಮತಕ್ಕೆ 36 ಶಾಸಕರು ಸಾಕಾದ ಕಾರಣ, ಸರಕಾರಕ್ಕೆ ಪತನದ ಭೀತಿ ಇಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಓಲೈಸಲು ಪ್ರತಿಯೊಂದು ವಿಷಯಕ್ಕೂ ಅಡ್ಡಿಪಡಿಸಿದರೆ, ಅವರೇನು ಉಪರಾಜ್ಯಪಾಲ ನಜೀಬ್‌ ಜಂಗ್‌ರನ್ನು ಭಾರತದ ಉಪ ರಾಷ್ಟ್ರಪತಿಯನ್ನಾಗಿ ಮಾಡುವುದಿಲ್ಲ.
– ಅರವಿಂದ ಕೇಜ್ರಿವಾಲ್‌, ದಿಲ್ಲಿ ಮುಖ್ಯಮಂತ್ರಿ
-ಉದಯವಾಣಿ

Comments are closed.