ಅಂತರಾಷ್ಟ್ರೀಯ

ಇಡಿ ಜಪ್ತಿಗೂ ಮುನ್ನವೇ ಆಸ್ತಿ ಮಾರಾಟ ಮಾಡಿದ ಚಾಲಾಕಿ ಮಲ್ಯ!

Pinterest LinkedIn Tumblr

mallya-18ನವದೆಹಲಿ: 17 ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಈಗ ಜಾರಿ ನಿರ್ದೇಶನಾಲಯಕ್ಕೂ ಚಳ್ಳೆ ಹಣ್ಣು ತಿನ್ನಿಸಿದ್ದು, ನೂರಾರು ಕೋಟಿ ರುಪಾಯಿಗಳ ಎರಡು ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಳ್ಳುವ ಮುನ್ನವೇ ಆಸ್ತಿ ಮಾರಾಟ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ವಿಜಯ್ ಮಲ್ಯ ಹಾಗೂ ಯುಬಿ ಹೊಲ್ಡಿಂಗ್ಸ್ ಜಂಟಿ ಒಡೆತನದ ಕೊಡಗಿನಲ್ಲಿರುವ ಸುಮಾರು 264 ಎಕರೆ ಕಾಫಿ ಎಸ್ಟೇಟ್ ಹಾಗೂ ಮತ್ತೊಂದು ಬೆಲೆಬಾಳುವ ಆಸ್ತಿಯನ್ನು ಮಲ್ಯ ಮಾರಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ,
ಕೊಡಗು ಜಿಲ್ಲೆಯಲ್ಲಿ ವಿಜಯ್ ಮಲ್ಯ ಆಸ್ತಿ ಮುಟ್ಟುಗೋಲಿಗೆ ಜಾರಿ ನಿರ್ದೇಶನಾಲಯದ ವಲಯಾಧಿಕಾರಿಗಳು ಆಗಮಿಸಿದ್ದ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಕಳೆದ ಜನವರಿಯಲ್ಲೇ ಸೋಮವಾರಪೇಟೆ ತಾಲೂಕಿನ ಕುಬುರು ಬಳಿ ಇರುವ ಮಲ್ಯ ಅವರ 291 ಎಕರೆ ಕಾಫಿ ಎಸ್ಟೇಟ್ ಅನ್ನು ಮಾರಾಟ ಮಾಡಲಾಗಿದ್ದು, ಉಳಿದ 28.5 ಎಕರೆ ಕಾಫಿ ತೋಟವನ್ನು ಮಾತ್ರ ಇಡಿ ಜಪ್ತಿ ಮಾಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದು ಕೋಟ್ಯಾಂತರ ರುಪಾಯಿ ಮೌಲ್ಯದ ಆಸ್ತಿಯಾಗಿದ್ದು, ಈ ಬಗ್ಗೆ ಯಾವುದೇ ಮಾಹಿತಿಯನ್ನು ಇಡಿ ನಿರಾಕರಿಸಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಕನಿಷ್ಠ ಎಂದರು ಒಂದು ಎಕರೆ 5ರಿಂದ 10 ಲಕ್ಷ ರುಪಾಯಿ ಬೆಲೆ ಬಾಳುತ್ತಿದ್ದು, ಕನಿಷ್ಠ 25 ಕೋಟಿ ರುಪಾಯಿ ಮೌಲ್ಯದ ಆಸ್ತಿ ಇದಾಗಿದೆ. ಆದರೆ ಇದು ಕೊಡಗಿನಲ್ಲಿರುವುದರಿಂದ ಇದು ತುಂಬಾ ಬೆಲೆ ಬಾಳುವ ಭೂಮಿ ಎನ್ನಲಾಗಿದೆ.
ಈ ಆಸ್ತಿ ಮಾರಾಟದ ಹಣವನ್ನು ವಿಜಯ್ ಮಲ್ಯ ಅವರು ಪಡೆದಿದ್ದಾರೆಯೇ? ಅಥವಾ ಅದನ್ನು ಅವರ ವಿದೇಶದಲ್ಲಿರುವ ಕಂಪನಿಗೆ ಪಾವತಿಮಾಡಲಾಗಿದೆಯೇ ಎಂಬಿತ್ಯಾದಿ ವಿವರಗಳ ಬಗ್ಗೆ ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ವರದಿ ವಿವರಿಸಿದೆ.

Comments are closed.