ಜಲಪಾಯ್‌ಗಾಡಿ : ಆಡೊಂದನ್ನು ಕೊಂದು ನುಂಗಲು ಯತ್ನಿಸಿ ಸೋತು ಜೀವನ್ಮರಣ ಹೋರಾಟದಲ್ಲಿದ್ದ 20 ಅಡಿ ಉದ್ದದ ಹೆಬ್ಟಾವನ್ನು ಗ್ರಾಮಸ್ತರು ಮತ್ತು ಅರಣ್ಯ ಸಿಬಂದಿಗಳು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ರೋಮಾಂಚಕ ಘಟನೆ ಪಶ್ಚಿಮ ಬಂಗಾಲದ ಜಲಪಾಯ್‌ಗಾಡಿ ಜಿಲ್ಲೆಯ ಮಲ್ಲಿಕ್ ಶೋಭಾ ಎಂಬ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಗುರುವಾರ ಸಂಜೆ ಆರು ಗಂಟೆಯ ಸುಮಾರಿಗೆ ಗ್ರಾಮಸ್ಥರಿಗೆ ಸೋನಾಖಲಿ ಅರಣ್ಯದ ಅಂಚಿನಲ್ಲಿ ಆಡೊಂದರ ಆಕ್ರಂದನ ಜೋರಾಗಿ ಕೇಳಿ ಬಂತು.
ಒಡನೆಯೇ ಅಲ್ಲಿಗೆ ಧಾವಿಸಿದ ಗ್ರಾಮಸ್ಥರಿಗೆ ಹೆಬ್ಟಾವು ತಾನು ಕೊಂದ ಆಡನ್ನು ನುಂಗಲು ಯತ್ನಿಸುತ್ತಿರುವುದು ಕಂಡು ಬಂತು. ಆದರೆ ಆಡನ್ನು ನಂಗಲಾಗದೆ ಚಡಪಡಿಸುತ್ತಿದ್ದ ಹೆಬ್ಟಾವು ಬಹುತೇಕ ಜೀವನ್ಮರಣ ಹೋರಾಟದಲ್ಲಿರುವಂತೆ ತೋರಿ ಬಂತು.
ನಾರಾಯಣ ಕಾರ್ ಎಂಬ ಅರಣ್ಯ ಸಿಬಂದಿಗೆ ಗ್ರಾಮಸ್ಥರು ಕೂಡಲೇ ಫೋನ್ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡರು. ಇವರೆಲ್ಲ ಸೇರಿ ಹೆಬ್ಟಾವಿನ ಬಾಯಿಯಿಂದ ಆಡನ್ನು ಹೊರಗೆಳೆಯುವ ಕೆಲಸ ಮಾಡಿದರು. ಆದರೆ ಆಡನ್ನು ಪೂರ್ತಿಯಾಗಿ ಹೊರಗೆಳೆಯುವಷ್ಟರಲ್ಲಿ ಅದು ಸತ್ತು ಹೋಗಿತ್ತು. ಆದರೆ ಹೆಬ್ಟಾವು ಬಚಾವಾಯಿತು !
ಬಳಿಕ ಹೆಬ್ಟಾವಿನ ಬಾಯನ್ನು ಗಟ್ಟಿಯಾಗಿ ಬಿಗಿ ಹಿಡಿದು ಅದರ ಮೈಯನ್ನು ಹಗ್ಗದಿಂದ ಬಿಗಿದು ಗೋಣಿ ಚೀಲದಲ್ಲಿ ತುರುಕಿ ಬಳಿಕ ಪುನಃ ಅರಣ್ಯದೊಳಗೆ ಬಿಡಲಾಯಿತು.
ಅರಣ್ಯ ಸಿಬಂದಿ ನಾರಾಯಣ ಅವರು ಈ ಹೆಬ್ಟಾವನ್ನು ಬರ್ಮಾ ರಾಕ್ ಪೈಥಾನ್ ಎಂದು ಗುರುತಿಸಿದರು. ಇದು ವಿಶ್ವದಲ್ಲೇ ಅತೀ ಉದ್ದದ ಮತ್ತು ಬಲಿಷ್ಠ ವರ್ಗದ ಹೆಬ್ಟಾವಾಗಿದೆ. ಈ ಜಾತಿಯ ಹೆಬ್ಟಾವು ನೀರಿನಲ್ಲಿ ಮಿಂಚಿನಂತೆ ವೇಗವಾಗಿ ಈಜುತ್ತವೆ ಮತ್ತು ಒಮ್ಮೆಲೇ 12ರಿಂದ 36ರಷ್ಟು ಮೊಟ್ಟೆಗಳನ್ನು ಇಡುತ್ತವೆ. ಇಲ್ಲೀಗ ಹಿಡಿಯಲ್ಪಟ್ಟಿರುವುದು ಗಂಡು ಹೆಬ್ಟಾವಾಗಿದೆ.
ಹೆಬ್ಟಾವಿನ ದಾಳಿಗೆ ಬಲಿಯಾದ ಆಡಿನ ಮಾಲಕ ರಾಹುಲ್ ಅಮೀನ್ ಅವರು, “ಕಾಡಿನಿಂದ ಬಂದ ಹೆಬ್ಟಾವು ದಾಳಿ ಮಾಡಿರುವುದು ಇದೇ ಮೊದಲಲ್ಲ; ಈ ಹಿಂದೆ ಹೆಬ್ಟಾವು ಗ್ರಾಮದಲ್ಲಿ ಮೂರು ದನ, ಕುರಿ ಇತ್ಯಾದಿಗಳನ್ನು ಕೊಂದು ತಿಂದಿವೆ’ ಎಂದು ಹೇಳಿದ್ದಾರೆ.
-ಉದಯವಾಣಿ
Comments are closed.