ರಾಷ್ಟ್ರೀಯ

ಬಡತನ ನಿವಾರಣೆಗೆ ಭಾರತೀಯರ ತಲಾ ಆದಾಯ 6 ಸಾವಿರ ಡಾಲರ್‌ ಆಗಬೇಕು: ರಘುರಾಮ್ ರಾಜನ್‌

Pinterest LinkedIn Tumblr

raghuram-rajanನವದೆಹಲಿ: ದೇಶದಲ್ಲಿನ ಬಡತನ ನಿವಾರಣೆಯಾಗಬೇಕಾದರೆ ನಮ್ಮ ಆರ್ಥಿಕತೆಯು 6,000 ದಿಂದ 7,000 ಡಾಲರ್‌ ತಲಾ ಆದಾಯದ ಆರ್ಥಿಕತೆಯಾಗಿ ಅಭಿವೃದ್ದಿ ಹೊಂದಬೇಕು. ಈ ಗುರಿಯನ್ನು ತಲುಪಬೇಕಾದರೆ ಇನ್ನು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಬೇಕಾಗಿದೆ ಎಂದು ಆರ್‌ಬಿಐ ಗವರ್ನರ್‌ ರಘುರಾಮ ರಾಜನ್‌ ಹೇಳಿದ್ದಾರೆ.
ಆರ್‌ಬಿಐ ಗವರ್ನರ್‌ ಆಗಿ ರಘುರಾಮ ರಾಜನ್‌ ಅವರ ಮೂರು ವರ್ಷಗಳ ಅಧಿಕಾರಾವಧಿ ಮುಗಿಯಲು ಇನ್ನು ಕೇವಲ ಮೂರು ತಿಂಗಳು ಬಾಕಿಯಿದೆ.
ರಾಜನ್‌ ಅವರನ್ನು ಮೋದಿ ಸರಕಾರ ಎರಡನೇ ಅವಧಿಗೆ ಆರ್‌ಬಿಐ ಗವರ್ನರ್‌ ಆಗಿ ಮುಂದುವರಿಸುತ್ತದೇ ಇಲ್ಲವೇ,ಅಥವಾ ಸ್ವತಃ ರಾಜನ್‌ ಮುಂದುವರಿಯಲು ಬಯಸುತ್ತಾರೆಯೇ ಇಲ್ಲವೇ ಎಂಬುದೀಗ ಕುತೂಹಲವಾಗಿ ಉಳಿದಿದೆ.
ಭಾರತದಂತೆ ಸಿಂಗಾಪುರ ಕೂಡ ಒಂದು ಕಾಲಘಟ್ಟದಲ್ಲಿ ಕೇವಲ 1,500 ಡಾಲರ್‌ ತಲಾ ಆದಾಯದ ದೇಶವಾಗಿತ್ತು. ಇವತ್ತು ಸಿಂಗಾಪುರದ ತಲಾ ಆದಾಯ 50,000 ಡಾಲರ್‌ ! ನಾವಿನ್ನೂ 1,500 ಡಾಲರ್‌ ತಲಾ ಆದಾಯದ ಆರ್ಥಿಕತೆಯಾಗಿಯೇ ಉಳಿದಿದ್ದೇವೆ. ನಮ್ಮ ದೇಶದಲ್ಲಿ ವಿಪರೀತವಾದ ದಾರಿದ್ರ್ಯವಿದೆ. ಇದನ್ನು ಹೋಗಲಾಡಿಸಲು ನಾವು ನಮ್ಮ ದೇಶದ ಆರ್ಥಿಕತೆಯನ್ನು ತಲಾ 6,000 ದಿಂದ 7,000 ಡಾಲರ್‌ ಆದಾಯದ ಆರ್ಥಿಕತೆಯನ್ನಾಗಿ ಅಭಿವೃದ್ಧಿಪಡಿಸಬೇಕು. ಇದಕ್ಕೆ ಏನಿಲ್ಲವೆಂದರೂ ನಾವು ಮುಂದಿನ 20 ವರ್ಷಗಳ ಕಾಲ ಸತತವಾಗಿ ಅವಿರತವಾಗಿ ಪ್ರಯತ್ನಿಸಬೇಕು; ರಾಷ್ಟ್ರೀಯ ಆದಾಯದ ಸಮಾನ ಹಂಚಿಕೆಗೆ ನಾವು ಆದ್ಯತೆ ನೀಡಬೇಕು ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

Comments are closed.