ರಾಷ್ಟ್ರೀಯ

ಕತಾರ್ ನಲ್ಲಿ ಖೈದಿಗಳ ಬಿಡುಗಡೆಗೂ ಮೋದಿ ಭೇಟಿಗೂ ಸಂಬಂಧವೇ ಇಲ್ಲ!

Pinterest LinkedIn Tumblr

MODI_QATARಮೋದಿಯವರು ಕತಾರ್ ಗೆ ಭೇಟಿ ನೀಡಿದ ನಂತರ ಕತಾರ್ 23 ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದೆ. ಮೋದಿಯವರು ಕತಾರ್ ಎಮಿರ್, ಶೇಕ್ ತಮೀಮ್ ಬಿನ್ ಹಮದ್ ಅಲ್ ತನಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಖೈದಿಗಳ ಬಿಡುಗಡೆಯಾಗಿದೆ. ಈ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೋದಿಯವರ ಮನವಿ ಮೇರೆಗೆ 23 ಖೈದಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಥ್ಯಾಂಕ್ಸ್ ಎಂದು ಸೋಮವಾರ ಟ್ವೀಟ್ ಮಾಡಿದ್ದರು.

ನಿಜ ಸಂಗತಿ ಏನೆಂದರೆ ರಂಜಾನ್ ಸಮಯದಲ್ಲಿ ಪ್ರತಿವರ್ಷ ಕತಾರ್ ಸರ್ಕಾರ ಸಂಪ್ರದಾಯದಂತೆ ಕ್ಷಮೆ ನೀಡಿ ಖೈದಿಗಳನ್ನು ಬಿಡುಗಡೆ ಮಾಡುತ್ತದೆ. ಈ ಬಾರಿಯೂ ತಮ್ಮ ಸಂಪ್ರದಾಯದಂತೆ ಖೈದಿಗಳನ್ನು ಬಿಡುಗಡೆ ಮಾಡಿದೆ. ಆದರೆ ಮೋದಿಯವರ ಭೇಟಿಗೂ, ಈ ಖೈದಿಗಳ ಬಿಡುಗಡೆಗೂ ಯಾವುದೇ ಸಂಬಂಧವಿಲ್ಲ! ಇದು ಕಾಕತಾಳೀಯ ಅಷ್ಟೇ.

Thank you Qatar – Thanks for releasing 23 Indian prisoners on the request of Prime Minister @narendramodi .
— Sushma Swaraj (@SushmaSwaraj) June 7, 2016
ಸುಷ್ಮಾ ಸ್ವರಾಜ್ ಅವರ ಟ್ವೀಟ್ ಮತ್ತು ಖೈದಿಗಳ ಬಿಡುಗಡೆಯ ಹಿನ್ನೆಲೆಯನ್ನು ಕೆದಕಿ ‘ದ ಹಿಂದೂ’ ಪತ್ರಿಕೆಯ ಡೆಪ್ಯುಟಿ ಎಡಿಟರ್ ಫೇಸ್ಬುಕ್ ನಲ್ಲೊಂದು ಪೋಸ್ಟ್ ಹಾಕಿದ್ದಾರೆ.

ರಂಜಾನ್ ಮಾಸಾರಂಭದಲ್ಲಿನ ಪುಣ್ಯ ಕೆಲಸ
ಅರಬ್ ರಾಷ್ಟ್ರಗಳಲ್ಲಿ ರಂಜಾನ್ ತಿಂಗಳಿನ ಆರಂಭ ಮತ್ತು ರಾಷ್ಟ್ರೀಯ ದಿನದಂದು ಖೈದಿಗಳನ್ನು ಬಂಧಮುಕ್ತ ಮಾಡಲಾಗುತ್ತದೆ, ಹೀಗೆ ಬಿಡುಗಡೆಯಾದ ಖೈದಿಗಳಲ್ಲಿ ನೇಪಾಳ, ಭಾರತ ಮತ್ತು ಫಿಲಿಫೇನ್ಸ್ ನ ಪ್ರಜೆಗಳಿದ್ದಾರೆ.

ಈ ಹಿಂದೆಯೂ ಖೈದಿಗಳನ್ನು ಬಿಡುಗಡೆ ಮಾಡಲಾಗಿತ್ತು!
2012 ರಲ್ಲಿ ಶೇಖ್ ಹಮದ್ ಬಿನ್ ಖಲೀಫಾ ಅಲ್ ತನಿ ಅವರು ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರೀಯ ದಿನದಂದು 60 ಖೈದಿಗಳನ್ನು ಬಿಡುಗಡೆ ಮಾಡಿದ್ದರು, ಇವರೆಲ್ಲರೂ ಲಂಚ, ದರೋಡೆ, ಮೋಸ ಮೊದಲಾದ ಅಪರಾಧಗಳನ್ನು ಮಾಡಿ ಶಿಕ್ಷೆ ಅನುಭವಿಸಿದ್ದರು.

2013 ರಲ್ಲಿ ಶೇಖ್ ತಮೀಮ್, ರಂಜಾನ್ ಮಾಸಾಚರಣೆಯ ವೇಳೆ 36 ಖೈದಿಗಳನ್ನು ಬಿಡುಗಡೆ ಮಾಡಿದ್ದರು, ಹೀಗೆ ಬಿಡುಗಡೆಯಾದವರಲ್ಲಿ 18 ಮಂದಿ ಫಿಲಿಫೇನ್, 17 ಭಾರತೀಯರು, 14 ನೇಪಾಳಿಗಳು ಮತ್ತು 5 ಮಂದಿ ಪಾಕಿಸ್ತಾನದ ಪ್ರಜೆಗಳಿದ್ದರು. ಕತಾರ್ ರಾಷ್ಟ್ರೀಯ ದಿನದಂದು ಫಿಲಿಫೇನ್ಸ್ ನ 9 ಖೈದಿಗಳನ್ನು ಬಂಧಮುಕ್ತಗೊಳಿಸಲಾಗಿತ್ತು.

2014ರಲ್ಲಿ ಕನಿಷ್ಟ 74 ಮಂದಿ ಖೈದಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 14 ಮಂದಿ ಭಾರತೀಯರಿದ್ದರು.

ಅರಬ್ ಸಂಯುಕ್ತ ರಾಷ್ಟ್ರಗಳ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಯೇದ್ ಅಲ್ ನಹ್ಯಾನ್ ಅವರ ಆಂತರಿಕ ಮೂಲಗಳ ಪ್ರಕಾರ ಈ ವರ್ಷ ರಂಜಾನ್ ಮಾಸಾಚರಣೆಯ ಸಂದರ್ಭದಲ್ಲಿ ಒಟ್ಟು 1,010 ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ.

ಖೈದಿಗಳ ಸನ್ನಡತೆಯನ್ನು ಪರಿಗಣಿಸಿ ಅವರನ್ನು ಬಂಧಮುಕ್ತಗೊಳಿಸಲಾಗುತ್ತಿದ್ದು, ಆ ಮೂಲಕ ಪವಿತ್ರ ಮಾಸದ ಆರಂಭದಲ್ಲಿ ಹೊಸ ಜೀವನ ಆರಂಭಿಸಲು ಖೈದಿಗಳಿಗೆ ಅವಕಾಶ ನೀಡಲಾಗುತ್ತದೆ.

Comments are closed.