ರಾಷ್ಟ್ರೀಯ

ಜಯಾ ಪ್ರಧಾನಿಗೆ ಧನ್ಯವಾದ ಸಲ್ಲಿಸಿದ್ಯಾಕೆ?

Pinterest LinkedIn Tumblr

jayaಚೆನ್ನೈ,: ಚೆನ್ನೈನಲ್ಲಿ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುನೋದನೆ ನೀಡಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮೋದಿಯವರಿಗೆ ಬರೆದ ಪತ್ರದಲ್ಲಿ ಅವರು “ವಾಶರಮನ್‌ಪೇಟ್‌ನಿಂದ ತಿರುವೊಟ್ರಿಯೂರ್/ ವಿಮ್ಕೋನಗರ್ ವರೆಗಿನ ಮೊದಲನೇ ಹಂತದ ಕಾರಿಡಾರ್ 1 ಮೆಟ್ರೋ ರೈಲು ಸೇವೆ ಯೋಜನೆಯನ್ನು 3,770 ಕೋಟಿ ವೆಚ್ಚದಲ್ಲಿ 9.51 ಕಿಲೋ ಮೀಟರ್ ವಿಸ್ತರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಇಟ್ಟ ಪ್ರಸ್ತಾವನೆಯನ್ನು ಸಂಪುಟ ಸಭೆ ಒಪ್ಪಿಕೊಂಡಿರುವುದು ತಿಳಿದುಬಂದಿದೆ ಎಂದು ಬರೆದಿದ್ದಾರೆ.

ಚೆನ್ನೈ ಮೆಟ್ರೋ ಯೋಜನೆ ಮೊದಲನೇ ಹಂತದ ವಿಸ್ತರಣೆ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ತಮಿಳುನಾಡು ಸರ್ಕಾರ ಮತ್ತು ಚೆನ್ನೈ ಜನತೆಯ ಪರವಾಗಿ ಧನ್ಯವಾದ ಹೇಳುತ್ತೇನೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಮನವಿಯನ್ನು ಪರಿಗಣಿಸಿ ಏಪ್ರಿಲ್ ನಿಂದ ಜೂನ್‌ವರೆಗೆ ಮೂರು ತಿಂಗಳ ಕಾಲ ಆಹಾರ ಧಾನ್ಯಗಳ ವಿಶೇಷ ಪೂರೈಕೆಯನ್ನು ಮಾಡಿದ್ದಕ್ಕೆ ಕೂಡ ಜಯಾ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಜಯಲಲಿತಾ ನಾಯಕತ್ವದ ತಮಿಳುನಾಡಿನ ಆಡಳಿತಾರೂಢ ಎಐಡಿಎಂಕೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಸೇರ್ಪಡೆಯಾಗಿ ಕೇಂದ್ರ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಹೀಗಾದಲ್ಲಿ ಎನ್‌ಡಿಎ ಮತ್ತಷ್ಟು ಬಲಗೊಳ್ಳುವುದಂತೂ ಸತ್ಯ.

ಈ ನಡೆ ಆರಂಭಿಕ ಹಂತದಲ್ಲಿದ್ದು ತಮಿಳುನಾಡಿನ ಪ್ರಮುಖ ಪಕ್ಷದೊಂದಿಗಿನ ಮೈತ್ರಿಯನ್ನು ಬಿಜೆಪಿ ಮೂಲಗಳು ಸಹ ಅಲ್ಲಗಳೆಯುತ್ತಿಲ್ಲ. ಎಐಡಿಎಂಕೆ ಲೋಕಸಭೆಯಲ್ಲಿ 39 ಸಂಸದರನ್ನು ಮತ್ತು ರಾಜ್ಯಸಭೆಯಲ್ಲಿ 12 ಸದಸ್ಯರನ್ನು ಹೊಂದಿದ್ದು ಅವರೊಂದಿಗಿನ ಮೈತ್ರಿ ಜಿಎಸ್‌ಟಿ ಬಿಲ್ ಪಾಸ್ ಮಾಡಲು ಎನ್‌ಡಿಎಗೆ ನೆರವಾಗಬಹುದು.

ಮುಂದಿನ ತಿಂಗಳ ಜಯಲಲಿತಾ ನವದೆಹಲಿಗೆ ಪ್ರಯಾಣ ಬೆಳಸಿ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆಗಳಿದ್ದು, ಎನ್‌ಡಿಎ ಜತೆಗೆ ತಾವು ಹೊಂದಲು ಇಚ್ಛಿಸುವ ಮೈತ್ರಿಯ ರೂಪದ ಬಗ್ಗೆ ಸ್ಪಷ್ಟಪಡಿಸಲಿದ್ದಾರೆ.

ಜಯಾ ಮೋದಿ ಸರ್ಕಾರದ ಭಾಗವಾಗುವುದಿಲ್ಲ, ಬದಲಾಗಿ ಹೊರಗಿನಿಂದ ಬೆಂಬಲ ನೀಡಬಹುದು ಎಂದು ಭಾವಿಸಲಾಗಿದೆ. ಆದರೆ ಈ ಕುರಿತು ತಮಗರಿವಿಲ್ಲವೆಂದು ಎಐಡಿಎಂಕೆ ಮೂಲಗಳು ತಿಳಿಸಿವೆ. ಪಕ್ಷದ ವರಿಷ್ಠೆ ಬಹಿರಂಗ ಪಡಿಸುವವರೆಗೂ ಅದು ಅವರಿಗೂ ಗುಟ್ಟಾಗಿಯೇ ಇರುವ ಸಾಧ್ಯತೆಗಳಿವೆ.

Comments are closed.