ಜೈಪುರ : ದೇಶದಲ್ಲಿ ಅತ್ಯಾಚಾರದ ಘಟನೆಗಳು ಹೆಚ್ಚುತ್ತಿರುವುದಕ್ಕೆ ನೆಹರು, ಗಾಂಧಿ ಕುಟುಂಬವೇ ಕಾರಣ ಎಂದು ರಾಜಸ್ಥಾನ ಬಿಜೆಪಿ ಶಾಸಕ ಜ್ಞಾನದೇವ ಅಹುಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜ್ಞಾನದೇವ ಅಹುಜಾ ಅವರು ಈ ಹಿಂದೆ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಮದ್ಯ ಸೇವಿಸಿ ಸೆಕ್ಸ್ ನಡೆಸುತ್ತಾರೆ; ನಗ್ನವಾಗಿ ತಿರುಗಾಡುತ್ತಾರೆ ಎಂದು ಹೇಳುವ ಮೂಲಕ ದೊಡ್ಡ ವಿವಾದಕ್ಕೆ ಕಾರಣರಾಗಿದ್ದರು.
ರಾಜಸ್ಥಾನದ ಅಳವಾರ್ ರಾಮಗಢದ ಶಾಸಕರಾಗಿರುವ ಅಹುಜಾ ಅವರು ಈ ಬಾರಿ ನೆಹರೂ, ಗಾಂಧಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡ ಬಗೆ ಹೀಗಿದೆ :
ದೇಶದಲ್ಲಿ ಅತ್ಯಾಚಾರದ ಪ್ರಕರಣ ಹೆಚ್ಚಲು ನೆಹರೂ, ಗಾಂಧಿ ಕುಟುಂಬವೇ ಕಾರಣವಾಗಿದೆ. ಆದುದರಿಂದ ನೆಹರೂ, ಗಾಂಧಿ ಸ್ಮಾರಕಗಳನ್ನು, ಪ್ರತಿಮೆಗಳನ್ನು ನಾಶಮಾಡಬೇಕು. ಇರಾಕ್‌ನ ಕೇಂದ್ರ ಬಗ್ಧಾದ್‌ನಲ್ಲಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಪ್ರತಿಮೆಗಳನ್ನು ಹೇಗೆ ಆಂದೋಲನಕಾರರು ನಾಶಪಡಿಸಿದರೋ ಹಾಗೆಯೇ ಇಲ್ಲಿ ಮಾಡಬೇಕಾಗಿದೆ.
ಅಹುಜಾ ಅವರು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೈವೀ ವ್ಯಕ್ತಿ ಎಂದು ಹಾಡಿ ಹೊಗಳಿ ದೇಶದಲ್ಲಿನ ಎಲ್ಲ ಸಾಮಾಜಿಕ ಪಿಡುಗುಗಳನ್ನು ಅವರು ಶೀಘ್ರವೇ ಸಂಪೂರ್ಣವಾಗಿ ತೊಡೆದುಹಾಕಲಿದ್ದಾರೆ ಎಂದು ಹೇಳಿದ್ದಾರೆ.
ಅಹುಜಾ ಅವರ ಈ ಹೇಳಿಕೆಗೆ ರಾಜಸ್ಥಾನದ ಕಾಂಗ್ರೆಸ್ ಘಟಕ ವ್ಯಗ್ರವಾಗಿದ್ದು ಅದನ್ನು ತೀವ್ರವಾಗಿ ಖಂಡಿಸಿದೆ. ಬಿಜೆಪಿ ಶಾಸಕ ಅಹುಜಾ ಮಾನಸಿಕವಾಗಿ ಅನರ್ಹ ವ್ಯಕ್ತಿಯಾಗಿದ್ದು ಆತನನ್ನು ಚಿಕಿತ್ಸೆಗಾಗಿ ಮೆಂಟಲ್ ಹಾಸ್ಪಿಟಲ್‌ಗೆ ಸೇರಿಸಬೇಕಾಗಿದೆ ಎಂದು ಅದು ಹೇಳಿದೆ.
ಅಹುಜಾ ಅವರು ಈ ಹಿಂದೆ, “ಜೆಎನ್‌ಯು ಕ್ಯಾಂಪಸ್‌ನಲ್ಲಿ ದಿನ ನಿತ್ಯ ಮೂರು ಸಾವಿರ ಕಾಂಡೋಮ್ ಹಾಗೂ ಗರ್ಭ ನಿರೋಧಕ ಇಂಜೆಕ್ಷನ್‌ಗಳು ಬಿದ್ದಿರುವುದನ್ನು ಕಾಣಬಹುದಾಗಿದೆ; ಇಲ್ಲಿನ ವಿದ್ಯಾರ್ಥಿಗಳು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಮೇಲೆ ಅತ್ಯಾಚಾರ – ಅನಾಚಾರ ಎಸಗುತ್ತಾರೆ; ಸಂಸತ್ತಿನ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವನ್ನು ಇಲ್ಲಿ ಹಾಡಿಹೊಗಳಲಾಗುತ್ತದೆ; ಹೀಗೆ ಮಾಡುವವರು ದೇಶದ್ರೋಹಿಗಳು’ ಎಂದು ಹೇಳಿದ್ದರು.
-ಉದಯವಾಣಿ
Comments are closed.