ರಾಷ್ಟ್ರೀಯ

ಭಾರತದಲ್ಲಿ ಪ್ರತಿ ಐವರು ಮಹಿಳೆಯರಲ್ಲಿ ನಾಲ್ಕು ಮಹಿಳೆಯರ ಮೇಲೆ ದೌರ್ಜನ್ಯ ! ICO ವರದಿಯಲ್ಲಿ ಕಳವಳಕಾರಿ ಸಂಗತಿ ಬಹಿರಂಗ

Pinterest LinkedIn Tumblr

gang-Rape

ನವದೆಹಲಿ: ಭಾರತೀಯ ಸಂಸ್ಕೃತಿ-ಸಂಸ್ಕಾರಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ನಾವೆಲ್ಲ ಬೆಚ್ಚಿ ಬೀಳುವಂತಹ ತೀವ್ರ ಆಘಾತಕಾರಿ ಸತ್ಯವೊಂದನ್ನು ಇಂಟರ್‌ನ್ಯಾಷನಲ್ ಚಾರಿಟಿ ಆರ್ಗನೈಸೇಷನ್ (ಆಕ್ಷನ್ ಏಡ್-ಯುಕೆ) ಬಹಿರಂಗಪಡಿಸಿದೆ. ಭಾರತದಲ್ಲಿ ಪ್ರತಿ ಐವರು ಮಹಿಳೆಯರಲ್ಲಿ ನಾಲ್ವರು ಮಹಿಳೆಯರು ಸಾರ್ವಜನಿಕವಾಗಿ ಹಲವು ಬಗೆಯಲ್ಲಿ (ಲೈಂಗಿಕ, ದೈಹಿಕ, ಮಾನಸಿಕ) ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಅದು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಎಂಬುದು ಇನ್ನೂ ಕಳವಳಕಾರಿ ಸಂಗತಿಯಾಗಿದೆ.

ಭಾರತದಲ್ಲಿ ಪ್ರತಿ ಕ್ಷಣವೂ ಮಹಿಳೆಯ ಮೇಲೆ ವಿವಿಧ ರೀತಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಹಿಂಸಾಕೃತ್ಯಗಳು ನಡೆಯುತ್ತಿವೆ ಎಂದು ಆಕ್ಷನ್ ಏಡ್ ಯುಕೆ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ. ದೇಶಾದ್ಯಂತ ವಿವಿಧ ನಗರಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ಮಾಹಿತಿ ಪಡೆಯಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿಯೇ ಲೈಂಗಿಕ ದೌರ್ಜನ್ಯ, ದೈಹಿಕ ದೌರ್ಜನ್ಯ ಹಾಗೂ ಹಿಂಸೆಗೆ ಗುರಿಯಾಗುವ ಮಹಿಳೆಯರ ಸಂಖ್ಯೆ ಶೇ.84ಕ್ಕೂ ಹೆಚ್ಚಿದ್ದು, ಇವರೆಲ್ಲರೂ 25 ರಿಂದ 35 ವಯೋಮಾನದವರು. ಇದರಲ್ಲಿ ಬಹುತೇಕರು ವಿದ್ಯಾರ್ಥಿನಿಯರು ಹಾಗೂ ಕಚೇರಿ ಮತ್ತಿತರೆಡೆ ಕೆಲಸ ಮಾಡುವ ಉದ್ಯೋಗಿಗಳು.

ಸಮೀಕ್ಷೆಗೊಳಪಡಿಸಿದ ಎಲ್ಲ ಮಹಿಳೆಯರೂ ಪ್ರತಿಕ್ಷಣ ತಮ್ಮ ಮೇಲೆ ನಡೆಯುವ ದೌರ್ಜನ್ಯ ಮತ್ತು ಹಿಂಸೆಗಳ ಬಗ್ಗೆ ನೇರವಾಗಿ, ಧೈರ್ಯವಾಗಿ ತಿಳಿಸಿದ್ದಾರೆ. ಈ ಸಮೀಕ್ಷೆಯ ನಂತರ ನಿಜಕ್ಕೂ ಭಾರತದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮತ್ತು ಗೌರವದಿಂದ ಬದುಕುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಮತ್ತು ಪರಿಸ್ಥಿತಿ ನೋಡಿದರೆ ಅದೇನೂ ದೊಡ್ಡ ಸುದ್ದಿಯೇ ಅಲ್ಲವೇನೋ ಎನ್ನಿಸುತ್ತದೆ ಎನ್ನುತ್ತಾರೆ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಸಂದೀಪ್ ಚಚ್ರಾ. ಯಾವುದೇ ಒಂದು ಸುಸಂಸ್ಕೃತ ದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿಲ್ಲ ಎನ್ನುತ್ತಾರೆ ಅವರು.

Comments are closed.