ನವದೆಹಲಿ: ಭಾರತದ ಮೇಲೆ ಸೇಡು ತೀರಿಸಿಕೊಳ್ಳುವ 22 ನಿಮಿಷಗಳ ಅರಬ್ ಭಾಷೆಯ ವಿಡಿಯೋ ತುಣುಕೊಂದನ್ನು ಐಸಿಸ್ ಉಗ್ರ ಸಂಘಟನೆ ಶುಕ್ರವಾರ ಬಿಡುಗಡೆ ಮಾಡಿದ್ದು, ಭಾರತೀಯ ಜಿಹಾದಿಗಳಿಂದಲೇ ದೇಶದ ನಾನಾ ಕಡೆ ವಿಧ್ವಂಸಕ ಕೃತ್ಯಗಳನ್ನು ನಡೆಸುವುದಾಗಿ ಹೇಳಿಕೊಂಡಿದೆ.
ದಕ್ಷಿಣ ಏಷ್ಯಾವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ವಿಡಿಯೋದಲ್ಲಿ ವಿವರಿಸಿರುವ ಐಸಿಸ್, ಬಾಬ್ರಿ ಮಸೀದಿ, ಗುಜರಾತ್, ಮುಜಾಫರ್ನಗರ ಮತ್ತು ಕಾಶ್ಮೀರದಲ್ಲಿ ನಡೆದ ಮುಸ್ಲಿಮರ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ. ಅಲ್ಲದೆ, ವಿಡಿಯೋದಲ್ಲಿ ಭಾರತೀಯ ಜಿಹಾದಿಗಳು ಎನ್ನಲಾದ ಉಗ್ರರು ಸಿರಿಯಾದಲ್ಲಿ ನಡೆಸಿರುವ ಹೋರಾಟದ ದೃಶ್ಯಾವಳಿಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಐಸಿಸ್ ಸಂಘಟನೆ ಭಾರತೀಯ ಮುಸ್ಲಿಮರನ್ನು ತನ್ನತ್ತ ಸೆಳೆಯಲಿಕ್ಕಾಗಿ ಇಂಥ ಕೃತ್ಯಗಳನ್ನು ನಡೆಸುತ್ತಿದೆ ಎಂದು ಹೇಳಲಾಗುತ್ತಿದ್ದು, 2014ರಲ್ಲಿ ಸಿರಿಯಾ ಮತ್ತು ಇರಾಕ್ಗೆ ತೆರಳಿದ್ದ ಥಾಣೆಯ ಇಂಜಿನಿಯರಿಂಗ್ ವಿದ್ಯಾರ್ಥಿ ಫಹಾದ್ ತನ್ವೀರ್ ಶೇಖ್ ಸೇರಿದಂತೆ ಅವರೊಂದಿಗೆ ತೆರಳಿದ್ದ ಉಳಿದ ಮೂವರನ್ನು ಈ ದುಷ್ಕೃತ್ಯಕ್ಕೆ ಬಳಸಿಕೊಳ್ಳುವ ಸುಳಿವು ನೀಡಿವೆ. ವಿಡಿಯೋದಲ್ಲಿ ಫಹಾದ್ನನ್ನಷ್ಟೇ ಕಾಣಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿಮಾಡಿದೆ.
ಆದರೆ ವರದಿಯಲ್ಲಿ ಎಲ್ಲೂ ಎಷ್ಟು ಮಂದಿ ಭಾರತೀಯರು ಸಿರಿಯಾ ಪಡೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ, ತರಬೇತಿ ಹೊಂದಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.
Comments are closed.