ನವದೆಹಲಿ (ಪಿಟಿಐ): ಇತ್ತೀಚೆಗೆ ವಿಧಾನಸಭೆ ಚುನಾವಣೆಗಳಲ್ಲಿ ಎದುರಾದ ಸೋಲಿನ ಬೆನ್ನಲ್ಲೆ, ಪಕ್ಷದ ಕಾರ್ಯಕರ್ತರಲ್ಲಿ ಭರವಸೆ ತುಂಬುವ ಮಾತುಗಳನ್ನಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ‘ಯಾವುದೇ ಸೋಲು ಶಾಶ್ವತ ಅಲ್ಲ’ ಎಂದು ಪ್ರತಿಪಾದಿಸಿದ್ದಾರೆ.
ರಾಜೀವ್ ಗಾಂಧಿ ಅವರ 25ನೇ ಪುಣ್ಯಸ್ಮರಣೆ ದಿನಾಚರಣೆಯ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.
‘ಮೂಲಭೂತ ತತ್ವಗಳನ್ನು ಅಲಕ್ಷಿಸಿ ಗಳಿಸುವ ಯಶಸ್ಸು ಬಹುದಿನ ಉಳಿಯುವುದಿಲ್ಲ. ತತ್ವಗಳಿಗೆ ಬದ್ಧರಾಗಿ ನಡೆದರೆ, ಯಾವುದೇ ಸೋಲು ಶಾಶ್ವತ ಅಲ್ಲ’ ಎಂದರು.
ಸಾಮಾಜಿಕ ಸಾಮರಸ್ಯಕ್ಕೆ ಕರೆ ನೀಡಿದ ಅವರು, ‘ಸಾಮಾಜಿಕ ಸಾಮರಸ್ಯ ಪ್ರೋತ್ಸಾಹಿಸುವ ಹಾಗೂ ಬಲಗೊಳಿಸುವ ಮೂಲಕ ಭಾರತದ ನೆಲದ ಮೇಲೆ ಬಿದ್ದ ರಾಜೀವ್ ಅವರ ಪ್ರತಿಹನಿ ರಕ್ತಕ್ಕೂ ಪರಿಹಾರ ನೀಡಬೇಕು’ ಎಂದರು.
‘ಅವರ ಸರಳತೆ, ಆಧುನಿಕತೆ, ಸಾಮರಸ್ಯ ಹಾಗೂ ಸಂವೇದನೆಯ ಮೌಲ್ಯಗಳನ್ನು ನಾವು ಅನುಸರಿಸಬೇಕು. ಅದುವೇ ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ. ಆಗ ಮಾತ್ರವೇ ನಮಲ್ಲಿ ರಾಜೀವ್ ಇದ್ದಾರೆ ಎಂದು ಹೇಳಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಯುವ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ನಾಯಕರ ಗೈರು ಎದ್ದು ಕಾಣುತ್ತಿತ್ತು.
ರಾಷ್ಟ್ರೀಯ
Comments are closed.