ರಾಷ್ಟ್ರೀಯ

ಬಂಗಾಳ ಜನತೆಗೆ ಹೃತ್ಪೂರ್ವಕ ಧನ್ಯವಾದ: ಮಮತಾ

Pinterest LinkedIn Tumblr

Mamataಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿಯಲು ಸಜ್ಜಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿಪಿಎಂ ಹಾಗೂ ಕಾಂಗ್ರೆಸ್ ಜತೆಗೂಡಿ ಚುನಾವಣೆಯ ಎದುರಿಸಿದ್ದು ಎರಡೂ ಪಕ್ಷಗಳಿಗೆ ಪ್ರಮಾದವಾಯ್ತು. ಅಧಿಕಾರ ಕಸಿಯಲು ವಿರೋಧಪಕ್ಷಗಳು ಸುಳ್ಳಿನ ಸರಮಾಲೆ ಪೋಣಿಸಿದ್ದವು ಎಂದು ಆರೋಪಿಸಿದರು.

ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲಿಡುತ್ತಿದ್ದಂತೆಯೇ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವಿರೋಧ ಪಕ್ಷಗಳ ಜಂಟಿ ಹೋರಾಟದ ನಡುವೆಯೂ ಅಭೂತಪೂರ್ವ ಗೆಲುವು ದಕ್ಕಿದೆ. ತೃಣಮೂಲ ಕಾಂಗ್ರೆಸ್‌ನಲ್ಲಿ ನಂಬಿಕೆ ಇರಿಸಿದ್ದಕ್ಕಾಗಿ ನಾನು ಬೆಂಗಾಳದ ಜನರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುವೆ. ವಿರೋಧ ಪಕ್ಷಗಳು ಹೆಣೆದಿದ್ದ ಸುಳ್ಳಿನ ಬಲೆಯನ್ನು ಜನರು ತಿರಸ್ಕರಿಸಿದ್ದಾರೆ’ ಎಂದು ನುಡಿದರು.

ಜಿಎಸ್‌ಟಿಗೆ ಬೆಂಬಲ: ಈ ವೇಳೆ ಬಿಜೆಪಿ ಜತೆಗಿನ ಟಿಎಂಸಿ ಸಂಬಂಧದ ಕುರಿತು ಮಾತನಾಡಿದ ಮಮತಾ, ‘ನಾವು ಸೈದ್ದಾಂತಿಕವಾಗಿ ಭಿನ್ನವಾಗಿದ್ದೇವೆ. ಆದರೆ, ಜನರ ಒಳಿತು ಮಾಡುವ ವಿಷಯಗಳಲ್ಲಿ ನಾವು ಯಾವಾಗಲೂ ಬೆಂಬಲ ನೀಡುತ್ತೇವೆ’ ಎಂದರು. ಈ ಹಿಂದೆ ಭರವಸೆ ನೀಡಿದಂತೆ ಜಿಎಸ್‌ಟಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ಕಾಂಗ್ರೆಸ್–ಸಿಪಿಎಂ ಕೂಟವನ್ನು ಒಂದು ‘ಪ್ರಮಾದ’ ಎಂದು ಜರೆದ ಅವರು, ‘ಸಿದ್ಧಾಂತ ಕಳೆದುಕೊಂಡರೆ ಎಲ್ಲವೂ ಕಳೆದಂತೆ. ದಾರಿ ತಪ್ಪಿಸುವ ಯತ್ನಗಳನ್ನು ಬಂಗಾಳದ ಜನರು ತಿರಸ್ಕರಿಸಿದ್ದಾರೆ’ ಎಂದರು.

‘ತೃಣಮೂಲ ಕಾಂಗ್ರೆಸ್ ಬಿಜೆಪಿಯಂತೆ ಕೋಮುವಾದಿ ಅಲ್ಲ. ನಾವು ಎಲ್ಲಾ ಧರ್ಮಗಳನ್ನು ಜತೆಯಲ್ಲಿ ಕೊಂಡ್ಯೊಯ್ಯುತ್ತೇವೆ’ ಎಂದರು.

Comments are closed.