ರಾಷ್ಟ್ರೀಯ

ಸಂಜೆ ವಿವಾಹ, ಮುಂಜಾನೆ ವಿಚ್ಛೇದನ ! ಇದು ವಿಚಿತ್ರ ಎನಿಸಿದರೂ ಸತ್ಯ

Pinterest LinkedIn Tumblr

marrage

ಮೀರತ್: ಸಂಜೆ ವೈಭವೋಪೇತ ವಿವಾಹ. ರಾತ್ರಿ ವಿವಾಹ ಮಂಟಪದಲ್ಲಿ ರಂಪಾಟ. ಮುಂಜಾನೆ ವೇಳೆಗೆ ವಿಚ್ಛೇದನ! ಇದು ವಿಚಿತ್ರ ಎನಿಸಬಹುದು. ಆದರೂ ಸತ್ಯ.

ಬಿಜನೂರ್ ಜಿಲ್ಲೆಯ ಕರೋಂಡಾಪುಚಡು ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಪ್ರಸಂಗವಿದು. ಚಾಂದ್ ಪುರಾನ್ ಗ್ರಾಮದ ವರ ಖಾರಿ ಇಮ್ರಾನ್ ಜತೆ ಕರೋಂಡಾಪುಚಡು ವಧುವಿನ ವಿವಾಹ ನಿಶ್ಚಿತವಾಗಿತ್ತು. ವಿವಾಹ ವಿಧಿಗಳು ನೆರವೇರಿದವು. ವಧೂವರರ ಮೆರವಣಿಗೆ ಮಾಡಬೇಕೆಂಬ ವೇಳೆಗೆ ಆಘಾತವೊಂದು ಸಂಭವಿಸಿತು.

ವಧುವಿನ ಕೋಣೆಯ ಕಪಾಟಿನಲ್ಲಿದ್ದ ಬೆಲೆಬಾಳುವ ಒಡವೆಗಳೂ ಸೇರಿ 1.45 ಲಕ್ಷ ರೂ. ಹಣ ಕಳುವಾಗಿತ್ತು. ವರನ ಸಂಬಂಧಿ ಅಖಿಬ್ ಎಂಬಾತ ಮಹಿಳೆಯೊಬ್ಬರ ಸಹಾಯದಿಂದ ಕಳವು ಮಾಡಿದ್ದಾನೆ ಎಂದು ವಧುವಿನ ತಂದೆ ನಾಸಿರ್ ಅಹ್ಮದ್ ಆರೋಪಿಸಿದರು.

ಭಾರಿಮೊತ್ತದ ಹಣ ಮತ್ತು ವಧುವಿನ ಒಡವೆಗಳು ನಾಪತ್ತೆಯಾದ ಬಗ್ಗೆ ಎಲ್ಲರಿಗೂ ದಿಗ್ಭ್ರಮೆ ಯಾಗಿ ರಾತ್ರಿ ಆಯೋಜನೆಗೊಂಡಿದ್ದ ವಧುವರರ ಮೆರವಣಿಗೆಗೆ ತಡೆ ಉಂಟಾಯಿತು. ವರನ ಕಡೆಯವರು ತಮ್ಮ ಸಂಬಂಧಿ ಮೇಲೆ ಹೊರಿಸಿದ ಆರೋಪದಿಂದ ಕೋಪಗೊಂಡರು . ಪರಸ್ಪರ ಆರೋಪ- ಪ್ರತ್ಯಾರೋಪದಿಂದ ವಿವಾಹ ಮಂಟಪ ರಾತ್ರಿ ಪೂರ್ಣ ರಣಾಂಗಣವಾಯಿತು. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಮುಂಜಾನೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಪಾಸಣೆ ನಡೆಸಿದರೂ ಕಳುವಾದ ಮಾಲು, ಆರೋಪಿ ಪತ್ತೆಯಾಗಲಿಲ್ಲ.

ಬೇಸರಗೊಂಡ ವರ ವಧುವಿಗೆ ‘ತಲಾಖ್’ ನೀಡಿಯೇಬಿಟ್ಟ. ಕೋಟ್ವಾಲಿ ಪೊಲೀಸ್ ಠಾಣೆಗೆ ಬಂದ ವಧು-ವರನ ಕಡೆಯವರಿಗೆ ಎಸ್ಐ ಶಿವಕುಮಾರ್ ನಡೆಸಲು ಯತ್ನಿಸಿದ ಸಂಧಾನ ಫಲಕಾರಿಯಾಗಲಿಲ್ಲ.

ನನಗೆ ತಲಾಖ್ ಕೊಡಲು ಮನಸ್ಸಿರಲಿಲ್ಲ. ಆದರೆ ಪರಿಸ್ಥಿತಿ ಹಾಗೆ ನಿರ್ಮಾಣವಾಗಿದ್ದರಿಂದ ಕಠಿಣ ನಿರ್ಧಾರ ಕೈಗೊಂಡೆ ಎಂದು ವರ ಹೇಳಿಬಿಟ್ಟ. ಎರಡೂ ಕಡೆಯವರು ಠಾಣೆಗೆ ಯಾವುದೇ ಲಿಖಿತ ದೂರು ನೀಡದಿದ್ದರೂ ವಿವಾಹ ಮುರಿದುಬಿತ್ತು.

Comments are closed.