
ಕಳೆದ 5 ವಾರಗಳಲ್ಲಿ 48 ಪಂದ್ಯ ಕಂಡಿರುವ ಐಪಿಎಲ್-9ರಲ್ಲಿ ಇನ್ನು 8 ಲೀಗ್ ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಪ್ಲೇ-ಆಫ್ ರೇಸ್ ಇದೀಗ ಕುತೂಹಲ ಕೆರಳಿಸಿದೆ. ಸದ್ಯಕ್ಕೆ ಸನ್ರೈಸರ್ಸ್ ಮಾತ್ರ ಪ್ಲೇ-ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದರೆ, ಉಳಿದ 3 ಸ್ಥಾನಕ್ಕೆ ಕೆಕೆಆರ್, ಮುಂಬೈ, ಡೆಲ್ಲಿ, ಆರ್ಸಿಬಿ, ಗುಜರಾತ್ ಲಯನ್ಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಪುಣೆ, ಪಂಜಾಬ್ ತಂಡಗಳು ಮಾತ್ರ ಈಗಾಗಲೆ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿವೆ. ಪ್ಲೇ-ಆಫ್ ಕೌತುಕದ ಸಂಕ್ಷಿಪ್ತ ಲೆಕ್ಕಾಚಾರ ಇಲ್ಲಿದೆ…
ಸನ್ರೈಸರ್ಸ್
ಇನ್ನೆರಡು ಪಂದ್ಯದಲ್ಲಿ ಹೀನಾಯ ಸೋಲು ಕಾಣದ ಹೊರತಾಗಿ ವಾರ್ನರ್ ಪಡೆಗೆ ಪ್ಲೇ-ಆಫ್ ಸ್ಥಾನ ಖಚಿತ. ಅಲ್ಲದೆ ಕೊನೇ ಎರಡೂ ಪಂದ್ಯ ಗೆದ್ದರೆ ಅಗ್ರ 2 ತಂಡಗಳಲ್ಲೂ ಸ್ಥಾನ ಖಾತ್ರಿ. ಆದರೆ ಕೊನೇ 2 ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳಿರುವುದರಿಂದ ಎಚ್ಚರಿಕೆಯ ನಡೆ ಅಗತ್ಯ.
ಮುಂದಿನ ಎದುರಾಳಿಗಳು: ಡೆಲ್ಲಿ (ಮೇ 20, ರಾಯ್ಪುರ), ಕೆಕೆಆರ್ (ಮೇ 22).
ಕೆಕೆಆರ್
ಆರ್ಸಿಬಿ ವಿರುದ್ಧ ಸೋಮವಾರ ಗೆದ್ದಿದ್ದರೆ ಕೊನೇ 2 ಪಂದ್ಯಗಳಲ್ಲೂ ಗೆಲ್ಲುವುದರಿಂದ ಅಗ್ರ 2 ತಂಡಗಳಲ್ಲಿ ಸ್ಥಾನ ಖಚಿತವೆನಿಸುತ್ತಿತ್ತು. ಆದರೀಗ ಪ್ಲೇ-ಆಫ್ ಆಸೆ ಜೀವಂತವಿಡಲೂ ಕೊನೇ 2 ಪಂದ್ಯ ಗೆಲ್ಲಬೇಕಾಗಿದೆ. 1 ಪಂದ್ಯ ಗೆದ್ದರೂ ಪ್ಲೇ-ಆಫ್ಗೇರುವ ಅವಕಾಶವಿದ್ದರೂ, ಉಳಿದ ಪಂದ್ಯಗಳ ಫಲಿತಾಂಶ ಅವಲಂಬಿಸಬೇಕಾಗುತ್ತದೆ.
ಮುಂದಿನ ಎದುರಾಳಿಗಳು: ಲಯನ್ಸ್ (ಮೇ 19), ಸನ್ರೈಸರ್ಸ್ (ಮೇ 22, ಕೋಲ್ಕತ).
ಡೆಲ್ಲಿ ಡೇರ್ಡೆವಿಲ್ಸ್
ಉಳಿದ 3 ಪಂದ್ಯ ಗೆದ್ದರೆ ಪ್ಲೇ-ಆಫ್ ಖಾತ್ರಿ. ಆದರೆ, ಒಂದರಲ್ಲಿ ಸೋತರೂ ರನ್ರೇಟ್ ಲೆಕ್ಕಾಚಾರ ಹಾಕಬೇಕಾಗುತ್ತದೆ. ಇನ್ನು 2 ಪಂದ್ಯ ಗೆದ್ದರಂತೂ ಡೆಲ್ಲಿ ಪ್ಲೇ-ಆಫ್ ಆಸೆ ಕೈಬಿಡಬೇಕಾಗುತ್ತದೆ. ಪುಣೆ ಹೊರತಾಗಿ ಮತ್ತೆರಡು ಕಠಿಣ ಎದುರಾಳಿಗಳಿರುವುದರಿಂದ ಡೆಲ್ಲಿ ಪ್ಲೇ-ಆಫ್ಗಾಗಿ ಸಾಕಷ್ಟು ಬೆವರು ಸುರಿಸಬೇಕಾಗಿದೆ.
ಮುಂದಿನ ಎದುರಾಳಿಗಳು: ಪುಣೆ (ಮೇ 17, ವಿಶಾಖಪಟ್ಟಣ), ಸನ್ರೈಸರ್ಸ್ (ಮೇ 20), ಆರ್ಸಿಬಿ (ಮೇ 22).
ಗುಜರಾತ್ ಲಯನ್ಸ್
ಸತತ ಗೆಲುವಿನ ಬಳಿಕ ಇದೀಗ ಮಂಕಾಗಿರುವ ಲಯನ್ಸ್, ಉಳಿದೆರಡು ಪಂದ್ಯಗಳಲ್ಲಿ ಗರ್ಜಿಸದಿದ್ದರೆ ಹೊರಬೀಳುವ ಅಪಾಯವನ್ನೂ ಎದುರಿಸುತ್ತಿದೆ. ಎರಡೂ ಪಂದ್ಯ ಗೆದ್ದರೆ ಪ್ಲೇ-ಆಫ್ ಖಚಿತ. ಆದರೆ 1 ಪಂದ್ಯ ಗೆದ್ದಾಗ ರನ್ರೇಟ್ ಲೆಕ್ಕಾಚಾರ ಅವಲಂಬಿಸಬೇಕಾಗಿರುವುದರಿಂದ ಲಯನ್ಸ್ ಈ ವಿಭಾಗದಲ್ಲಿ ಹಿನ್ನಡೆ ಅನುಭವಿಸುತ್ತಿದೆ.
ಮುಂದಿನ ಎದುರಾಳಿಗಳು: ಕೆಕೆಆರ್ (ಮೇ 19, ಕಾನ್ಪುರ), ಮುಂಬೈ (ಮೇ 21).
ಮುಂಬೈ ಇಂಡಿಯನ್ಸ್
ಹಾಲಿ ಚಾಂಪಿಯನ್ ತಂಡ ಉಳಿದೊಂದು ಪಂದ್ಯ ಗೆದ್ದರೂ ಪ್ಲೇ-ಆಫ್ ಸ್ಥಾನ ಖಾತ್ರಿಯಾಗಲು ಡೆಲ್ಲಿ, ಆರ್ಸಿಬಿ ತಂಡಗಳ ಫಲಿತಾಂಶವನ್ನು ಕಾದುನೋಡಬೇಕಾಗುತ್ತದೆ. ರನ್ರೇಟ್ ಲೆಕ್ಕಾಚಾರದಲ್ಲಿ ಇವೆರಡು ತಂಡಗಳಿಗಿಂತ ಹಿಂದಿರುವುದು ಇದಕ್ಕೆ ಕಾರಣ.
ಮುಂದಿನ ಎದುರಾಳಿ: ಲಯನ್ಸ್ (ಮೇ 21, ಕಾನ್ಪುರ).
ಆರ್ಸಿಬಿ
ಕೆಕೆಆರ್ ವಿರುದ್ಧದ ಗೆಲುವಿನಿಂದ ಆರ್ಸಿಬಿ, ಇನ್ನು ಉಳಿದೆರಡೂ ಪಂದ್ಯ ಗೆದ್ದು ಸರಾಗವಾಗಿ ಪ್ಲೇ-ಆಫ್ಗೇರಬಹುದು. ಉತ್ತಮ ರನ್ರೇಟ್ ಇರುವುದು ಕೊಹ್ಲಿ ಪಡೆಗೆ ವರದಾನ. ಉಳಿದೆರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ ಆರ್ಸಿಬಿಗೆ ಆಸೆ ಇದೆ. ಯಾಕೆಂದರೆ ಇಲ್ಲೂ ಉತ್ತಮ ರನ್ರೇಟ್ ಆರ್ಸಿಬಿ ಕೈಹಿಡಿಯುವ ನಿರೀಕ್ಷೆ ಇಡಬಹುದು. ಪಂಜಾಬ್ ವಿರುದ್ಧ ತವರಿನಲ್ಲೇ ಆಡಲಿರುವುದು ಲಾಭದಾಯಕ. ಇನ್ನು ಡೆಲ್ಲಿ ವಿರುದ್ಧದ ‘ಕೊನೇ ನಾಕೌಟ್’, ಎಲಿಮಿನೇಟರ್ ಕಾದಾಟದ ಟಿಕೆಟ್ಗಾಗಿ ನಡೆಯುವ ಹೋರಾಟವೆನಿಸಬಹುದು.
ಮುಂದಿನ ಎದುರಾಳಿಗಳು: ಪಂಜಾಬ್ (ಮೇ 18, ಬೆಂಗಳೂರು), ಡೆಲ್ಲಿ (ಮೇ 22, ರಾಯ್ಪುರ).