
ನವದೆಹಲಿ: ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಬಗೆಗೆ ಅನುಕಂಪ ಉಳ್ಳ ೧೨ಕ್ಕೂ ಹೆಚ್ಚು ಮಂದಿಯ ತಂಡವನ್ನು ಹುಟ್ಟುಹಾಕಿದ ಐಸಿಸ್ನ (ಇಸ್ಲಾಮಿಕ್ ಸ್ಟೇಟ್) ಪ್ರಮುಖ ನೇಮಕಾತಿದಾರ ಶಫಿ ಅರ್ಮರ್ ಈಗಲೂ ಜೀವಂತವಾಗಿದ್ದು ಹೊಸ ನೇಮಕಾತಿಗಳಿಗೆ ಯತ್ನಿಸುತ್ತಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.
ಅರ್ಮರ್ ಕರ್ನಾಟಕದ ಭಟ್ಕಳದ ನಿವಾಸಿಯಾಗಿದ್ದು ಏಪ್ರಿಲ್ನಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಹತನಾಗಿದ್ದಾನೆ ಎಂದು ವರದಿಯಾಗಿತ್ತು. ‘ಕೆಲವು ಸಾಮಾಜಿಕ ಜಾಲತಾಣಗಳು ಅರ್ಮರ್ ಸಾವಿನ ಬಗ್ಗೆ ಪ್ರಕಟಿಸಿದ್ದವು. ಆದರೆ ನಮಗೆ ಲಭಿಸಿರುವ ವರ್ತಮಾನಗಳ ಪ್ರಕಾರ ಆತ ಈಗಲೂ ನೂತನ ನೇಮಕಾತಿಗಳಿಗೆ ಯತ್ನಿಸುತ್ತಿದ್ದಾನೆ. ಆತನ ಸಂಪರ್ಕಕ್ಕೆ ಬಂದ ಇಂತಹ ವ್ಯಕ್ತಿಗಳ ಮೇಲೆ ಭದ್ರತಾ ಸಂಸ್ಥೆಗಳು ನಿಗಾ ಇರಿಸಿವೆ’ ಎಂದು ಕೇಂದ್ರೀಯ ಭಯೋತ್ಪಾದಕ ನಿಗ್ರಹ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅರ್ಮರ್ ಪ್ರಸ್ತುತ ಸಿರಿಯಾದ ಐಸಿಸ್ ಆಕ್ರಮಿತ ಪ್ರದೇಶಗಳಿಂದ ತನ್ನ ಕಾರ್ಯಾಚರಣೆ ನಡೆಸುತ್ತಿದ್ದಾನೆ. ಸೆರೆ ಸಿಕ್ಕಿರುವ ಹಲವಾರು ಮಂದಿ ಭಯೋತ್ಪಾದಕ ಸಂಘಟನೆಯ ಅನುಕಂಪದಾರರು ತಮ್ಮೊಂದಿಗೆ ಸಂಪರ್ಕ ಸಾಧಿಸಿರುವ ವ್ಯಕ್ತಿ ತನ್ನನ್ನು ಭಟ್ಕಳದ ಯೂಸುಫ್ ಅಲ್-ಹಿಂದಿ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ ಎಂದು ತನಿಖಾ ತಂಡಕ್ಕೆ ತಿಳಿಸಿದ್ದಾರೆ.