ರಾಷ್ಟ್ರೀಯ

ತಮಿಳುನಾಡು ಚುನಾವಣೆ ಮಹಿಮೆ… ! ಮೂರು ಕಂಟೈನರ್‌ಗಳಲ್ಲಿ ಸಾಗಿಸುತ್ತಿದ್ದ 570 ಕೋಟಿಗೂ ಅಧಿಕ ಮೊತ್ತದ ಹಣ ವಶ

Pinterest LinkedIn Tumblr

tamil

ಕೊಯಮತ್ತೂರು: ತಮಿಳುನಾಡಿನ ತಿರುಪೂರ್‌ನಲ್ಲಿ ಜಿಲ್ಲೆಯಲ್ಲಿ ಮೂರು ಕಂಟೈನರ್‌ಗಳಲ್ಲಿ ಸಾಗಿಸುತ್ತಿದ್ದ 570 ಕೋಟಿಗೂ ಅಧಿಕ ಮೊತ್ತವನ್ನು ಚುನಾವಣಾಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ. ಹಣ ಸಾಗಿಸುತ್ತಿದ್ದ ವಾಹನಗಳಲ್ಲಿದ್ದವರು ಈ ಮೊತ್ತ ಅಂತರ್ ಬ್ಯಾಂಕ್ ಹಣ ವರ್ಗಾವಣೆಗೆ ಸಂಬಂಧಿಸಿದ್ದಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

570 ಕೋಟಿ ರೂ.ಗಳನ್ನು ಕೊಯಮತ್ತೂರಿನ ಎಸ್‌ಬಿಐನಿಂದ ವಿಶಾಖಪಟ್ಟಣಂನ ವಿವಿಧ ಶಾಖೆಗಳಿಗೆ ತಲುಪಿಸಲು ಹಣ ಸಾಗಿಸಲಾಗುತ್ತಿತ್ತು ಎಂದು ವಾಹನ ಸಿಬ್ಬಂದಿ ಹೇಳಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅವರ ಬಳಿ ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆರುನಲ್ಲೂರ್ – ಕುನ್ನತ್ತೂರ್ ಬೈಪಾಸ್ ರಸ್ತೆಯಲ್ಲಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ಈ ಹಣ ಪತ್ತೆಯಾಗಿದೆ.

ಚುನಾವಣಾ ಆಯೋಗದ ಸಂಚಾರಿ ತನಿಖಾ ದಳದ ಅಧಿಕಾರಿಗಳು ಅರೆಸೇನಾ ಪಡೆಗಳ ಜತೆಗೂಡಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಈ ಹಣ ಪತ್ತೆಯಾಗಿದೆ. ಮೂರು ಕಂಟೈನರ್‌ಗಳು ಮತ್ತು ಅವುಗಳಿಗೆ ಬೆಂಗಾವಲಾಗಿ ತೆರಳುತ್ತಿದ್ದ ಕಾರುಗಳನ್ನು ತಡೆಯಲು ಪೊಲೀಸರು ಯತ್ನಿಸಿದರಾದರೂ ನಿಲ್ಲಿಸದೇ ಹೋದಾಗ ಅವುಗಳನ್ನು ಬೆನ್ನತ್ತಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಚೆಂಗಪಲ್ಲಿ ಸಮೀಪ ಅವುಗಳನ್ನು ತಡೆಯವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಂಟೈನರ್‌ಗಳಲ್ಲಿ ಹಲವಾರು ಬಾಕ್ಸ್‌ಗಳಲ್ಲಿ ಹಣವನ್ನು ತುಂಬಿಡಲಾಗಿತ್ತು. ಕಾರುಗಳಲ್ಲಿದ್ದ ಜನ ತಾವು ಆಂಧ್ರಪ್ರದೇಶದ ಪೊಲೀಸರೆಂದು ತಿಳಿಸಿದ್ದಾರೆ. ಆದರೆ, ಅವರು ಸಮವಸ್ತ್ರ ಧರಿಸಿರಲಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಶಕ್ಕೆ ತೆಗೆದುಕೊಳ್ಳಲಾದ ಮೊತ್ತವನ್ನು ತಿರುಪೂರ್ ಜಿಲ್ಲಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.
ಪೊಲೀಸರ ವಿಚಾರಣೆ ಸಂದರ್ಭದಲ್ಲಿ ವಾಹನಗಳನ್ನು ತಡೆದರೂ ಏಕೆ ನಿಲ್ಲಿಸಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರಿಸಿರುವ ಬಂಧಿತರು, ಪೊಲೀಸರನ್ನು ಕಂಡು ಹೆದರಿಕೆ ಉಂಟಾದ್ದರಿಂದ ವಾಹನಗಳನ್ನು ನಿಲ್ಲಿಸಲಿಲ್ಲ ಎಂದಿದ್ದಾರೆ.

ಕೊಯಮತ್ತೂರು ಮತ್ತು ವಿಶಾಖಪಟ್ಟಣಂನ ಬ್ಯಾಂಕ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ವಿಧಾನಸಭೆಗೆ ನಾಡಿದ್ದು ಚುನಾವಣೆ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಿಕೆ ಮಾಡಲು ಈ ಹಣ ಸಾಗಿಸಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ.

ಈ ನಡುವೆ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 5 ಗಂಟೆಗೆ ತೆರೆ ಬೀಳಲಿದೆ.ಸುಮಾರು ಎರಡು ತಿಂಗಳಿಂದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಉರಿಬಿಸಿಲನ್ನೂ ಲೆಕ್ಕಿಸದೆ, ಮತದಾರರನ್ನು ತಮ್ಮತ್ತ ಸೆಳೆಯುವಲ್ಲಿ ಸಾಕಷ್ಟು ಬೆವರು ನೀರು ಸುರಿಸಿದ್ದಾರೆ.

234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಾಡಿದ್ದು ಮತದಾನ ನಡೆಯಲಿದ್ದು, 3,776 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5 ಕೋಟಿ 79 ಲಕ್ಷ ಮತದಾರರು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.

ಎಐಎಡಿಎಂಕೆ ಮುಖ್ಯಸ್ಥೆ ಹಾಲಿ ಮುಖ್ಯಮಂತ್ರಿ ಜಯಲಲಿತಾ, ಮಾಜಿ ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಡಾ. ಎಂ. ಕರುಣಾನಿಧಿ, ‌ಡಿಎಂಡಿಕೆ ನಾಯಕ ವಿಜಯಕಾಂತ್ ಹಾಗೂ ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಮತದಾರರನ್ನು ಓಲೈಸಲು ಎಲ್ಲ ರೀತಿಯ ಕಸರತ್ತು ನಡೆಸಿರುವ ನಾಯಕರು, ತಮ್ಮ ಪಕ್ಷಗಳ ಪ್ರಣಾಳಿಕೆಗಳ ಮೂಲಕ ಭರಪೂರ ಭರವಸೆಗಳನ್ನು ನೀಡಿದ್ದಾರೆ.

Write A Comment