ರಾಷ್ಟ್ರೀಯ

ಸಿಂಹಸ್ತ ಕುಂಭ ಮೇಳದಲ್ಲಿ ಆಲಿಕಲ್ಲು ಮಳೆಗೆ ಸಿಲುಕಿದ ಹಿಂದು ಭಕ್ತಾದಿಗಳಿಗೆ ವಾಸ್ತವ್ಯ, ಆಹಾರದ ವ್ಯವಸ್ಥೆ ಕಲ್ಪಿಸಿದ ಮಸೀದಿಗಳು

Pinterest LinkedIn Tumblr

shelter

ಉಜ್ಜಯಿನಿ: ಸಿಂಹಸ್ತ ಕುಂಭ ಮೇಳದಲ್ಲಿ ಆಲಿಕಲ್ಲು ಮಳೆಗೆ ಸಿಲುಕಿ ವಾಸ್ತವ್ಯಕ್ಕೆ ನೆಲೆ ಇಲ್ಲದೆ ತೊಂದರೆಗೆ ಸಿಲುಕಿರುವ ಸಹಸ್ರಾರು ಹಿಂದು ಭಕ್ತಾದಿಗಳ ನೆರವಿಗೆ ಮುಸ್ಲಿಂ ಬಾಂಧವರು ಆಗಮಿಸಿದ್ದಾರೆ. ಅವರು ಮಸೀದಿಗಳಲ್ಲಿ ಭಕ್ತಾದಿಗಳಿಗೆ ನೆಲೆ ಕಲ್ಪಿಸಿದ್ದು, ಆಹಾರದ ವ್ಯವಸ್ಥೆ ಸಹ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಹೌದು ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುತ್ತಿರುವ ಸಿಂಹಸ್ತ ಕುಂಭದಲ್ಲಿ. ಉಜ್ಜಯಿನಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಲಕ್ಷಾಂತರ ಭಕ್ತರು ವಾಸ್ತವ್ಯಕ್ಕೆ ನೆಲೆ ಸಿಗದೆ ಪರದಾಡುತ್ತಿದ್ದಾರೆ. ಇದನ್ನು ಗಮನಿಸಿದ ಮುಸ್ಲಿಂ ಬಾಂಧವರು ತೊಂದರೆಗೆ ಸಿಲುಕಿರುವ ಭಕ್ತಾದಿಗಳಿಗೆ ಮಸೀದಿಗಳಲ್ಲಿ ಆಶ್ರಯ ನೀಡಿದ್ದಾರೆ ಮತ್ತು ಭಕ್ತಾದಿಗಳಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಈ ಸಂಬಂಧ ಕುಂಭ ಮೇಳದಲ್ಲಿ ಭಿತ್ತ ಪತ್ರಗಳಲ್ಲಿ ಅಂಟಿಸಿ ಭಕ್ತಾದಿಗಳನ್ನು ತಮ್ಮ ಮಸೀದಿಗೆ ಬರುವಂತೆ ಕೋರಿದ್ದಾರೆ. ಈ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ ಎಂದು ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಘಟನೆಗಳು ಎರಡು ಸಮುದಾಯಗಳ ನಡುವಿನ ಬಾಂಧವ್ಯವನ್ನು ತೋರ್ಪಡಿಸುತ್ತವೆೆ.

ಒಂದು ತಿಂಗಳು ನಡೆಯುವ ಸಿಂಹಸ್ತ ಕುಂಭ ಮೇಳದಲ್ಲಿ ಇದುವರೆಗೆ ಸುಮಾರು 30 ಲಕ್ಷ ಭಕ್ತಾದಿಗಳು ಪುಣ್ಯ ಸ್ನಾನ ಮಾಡಿದ್ದು, ಇನ್ನೂ ಲಕ್ಷಾಂತರ ಜನರು ಪುಣ್ಯ ಸ್ನಾನಕ್ಕಾಗಿ ಆಗಮಿಸುತ್ತಿದ್ದಾರೆ.

Write A Comment