ರಾಷ್ಟ್ರೀಯ

ಅರಬ್ಬಿ ಸಮುದ್ರದಲ್ಲಿ ಆಕಾಶದೆತ್ತರಕ್ಕೆ ಎದ್ದು ನಿಲ್ಲಲಿರುವ ಶಿವಾಜಿ

Pinterest LinkedIn Tumblr

Shivaji

ಕಣಕಣದಲ್ಲೂ ಸ್ವಾಭಿಮಾನ ತುಂಬಿಕೊಂಡ ದೇಶಭಕ್ತ ರಾಜರ ಪೈಕಿ ಶಿವಾಜಿ ಮಹಾರಾಜ್ ಕೂಡ ಒಬ್ಬರು. ಇತಿಹಾಸದ ಪುಟಗಳಲ್ಲಿ ಹೆಸರು ಮಾಡಿದ ಸಾಮ್ರಾಟ, ಇಂತಹ ಮಹಾನ್ ನಾಯಕನ ಪ್ರತಿಮೆಯೊಂದನ್ನು ಅರಬ್ಬಿ ಸಮುದ್ರದ ಮಧ್ಯದಲ್ಲಿ ಸ್ಥಾಪಿಸಲು ಸಿದ್ಧತೆ ನಡೆದಿದೆ. ಒಂದು ವೇಳೆ ಇದು ಪೂರ್ಣಗೊಂಡರೆ ಜಗತ್ತಿನ ಅತಿ ಎತ್ತರದ ಪ್ರತಿಮೆಗಳಲ್ಲಿ ಇದು ಮೊದಲ ಸ್ಥಾನದಲ್ಲಿರಲಿದೆ.

ಲಿಬರ್ಟಿ ಪ್ರತಿಮೆಗಿಂತ ಎರಡುಪಟ್ಟು ಎತ್ತರ ಅಂದರೆ ೫೯೮ ಅಡಿ ಎತ್ತರದಲ್ಲಿ ಉಕ್ಕಿನ ಮನುಷ್ಯನನ್ನು ನಿಲ್ಲಿಸಲು ಎಲ್ಲಾ ತಯಾರಿ ನಡೀತಿದೆ. ಏಕತೆಯ ಪ್ರತೀಕವಾದ ಪಟೇಲರ ಈ ಪ್ರತಿಮೆ ಜಗತ್ತಿನ ಅತಿ ಎತ್ತರದ ಪ್ರತಿಮೆ ಅಂತ ಇಡೀ ಜಗತ್ತು ಭಾರತದತ್ತ ತಿರುಗಿ ನೋಡಿತ್ತು. ಆದರೆ ಈಗ ಮತ್ತೆ ಭಾರತದತ್ತ ಜಗತ್ತು ತಿರುಗಿ ನೋಡೋ ಸಮಯ ಬಂದಿದೆ. ಸರ್ದಾರ್ ಪಟೇಲರ ಏಕತಾ ಪ್ರತಿಮೆಗಿಂತ ಎತ್ತರದಲ್ಲಿ, ಛತ್ರಪತಿ ಶಿವಾಜಿಯ ಪ್ರತಿಮೆ ನಿಲ್ಲಿಸಲು ಎಲ್ಲ ತಯಾರಿ ನಡೆದಿದೆ.

ಮಹಾರಾಷ್ಟ್ರದ ಮುಂಬೈನ ನಾರಿಮನ್ ಪಾಯಿಂಟ್‌ನಿಂದ ನಾಲ್ಕು ಕಿಲೋ ಮೀಟರ್ ದೂರದ, ಅರಬ್ಬೀ ಸಮುದ್ರದದಲ್ಲಿ, ಶಿವಾಜಿ ಪ್ರತಿಮೆಯನ್ನು ನಿರ್ಮಾಣ ಮಾಡೋದಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಸಮುದ್ರದ ಮಧ್ಯಭಾಗದಲ್ಲಿ ದ್ವೀಪದ ಮಾದರಿ ಪ್ರದೇಶದಲ್ಲಿ ಶಿವಾಜಿಯ ಅತಿ ಎತ್ತರದ ೬೨೩ ಅಡಿಯ ಪ್ರತಿಮೆ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ. ನಾರಿಮನ್ ಪಾಯಿಂಟ್‌ನಿಂದ ನಾಲ್ಕು ಕಿಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಒಂದು ಬೃಹತ್ ಕಲ್ಲಿದೆ. ಈ ಕಲ್ಲನ್ನು ಆಧಾರವಾಗಿಟ್ಟುಕೊಂಡು, ೧೬ ಹೆಕ್ಟೇರ್ ಪ್ರದೇಶದಲ್ಲಿ ಶಿವಾಜಿಯ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಇನ್ನು ಇಲ್ಲಿಗೆ ಬೋಟ್‌ನಲ್ಲೇ ಬರಬೇಕಾಗುತ್ತದೆ. ಅಥವಾ ಹೆಲಿಕಾಪ್ಟರ್ ಮೂಲಕ ಬರಬಹುದು. ಹಚ್ಚ ಹಸುರಿನ ವಿಶಾಲವಾದ ಉದ್ಯಾನವನದ ಜೊತೆಗೆ ನೃತ್ಯವಾಡುವ ನೀರಿನ ಚಿಲುಮೆಯ ಹಿಂಭಾಗದಲ್ಲಿ, ಕುದುರೆ ಏರಿ ಆಕಾಶದೆತ್ತರದಲ್ಲಿ ಶಿವಾಜಿ ರಾರಾಜಿಸಲಿದ್ದಾನೆ.

ಮೆಟ್ಟಿಲುಗಳನ್ನು ಹತ್ತುವ ಮೂಲಕ, ಮೊದಲ ಮಹಡಿಯನ್ನು ತಲುಪಬಹುದು.. ಅಲ್ಲಿಂದ ಅರಬ್ಬೀ ಸಮುದ್ರದತ್ತ ಕಣ್ಣು ಹಾಯಿಸಿದರೆ ಮುಂಬೈನ ವಿಹಂಗಮ ನೋಟ ಕಣ್ಣಿಗೆ ಕಾಣುತ್ತದೆ. ಇನ್ನು ಇಲ್ಲಿ ೩೦೦ರಿಂದ ೪೦೦ ಮಂದಿ ಕುಳಿತುಕೊಳ್ಳಲು ಅನುಕೂಲವಾಗುವಂಥ ಬಯಲು ರಂಗ ಮಂದಿರ ಕೂಡ ಇರುತ್ತದೆ.

ಅಲ್ಲಿ ಶಿವಾಜಿ ಮಹಾರಾಜನ ಸಾಮ್ರಾಜ್ಯದ ಅನಾವರಣವಾಗುತ್ತದೆ. ಪ್ರತಿಯೊಂದು ಗೋಡೆಯೂ ಕೂಡ, ಶಿವಾಜಿ ಬದುಕಿನ ಚಿತ್ರಣವನ್ನು ಇಂಚಿಂಚಾಗಿ ಬಿಚ್ಚಿಡುತ್ತವೆ. ಇಷ್ಟೇ ಅಲ್ಲ, ಶಿವಾಜಿ ಸಾಧನೆ ಮತ್ತು ಸಾಮ್ರಾಜ್ಯವನ್ನು ಉಣಬಡಿಸೋದಕ್ಕೆ ಅಲ್ಲಿ ಲೈಬ್ರರಿ ಕೂಡ ಇರುತ್ತದೆ. ಬರೀ ಪುಸ್ತಕದ ಲೈಬ್ರರಿ ಅಲ್ಲ.. ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯವನ್ನು ನೀಡುವ ಮೂಲಕ, ಆ ಲೈಬ್ರರಿಗೆ ಡಿಜಿಟಲ್ ಟಚ್ ಕೊಡಲಾಗುತ್ತದೆ. ಇನ್ನು ಮೇಲೆ ಹತ್ತುವುದಕ್ಕೆ ಮತ್ತು ಇಳಿಯುವುದಕ್ಕೆ ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಒಂದೊಂದು ಸಲ ೧೦ ರಿಂದ ೨೦ ಜನ ಈ ಲಿಫ್ಟ್‌ನಲ್ಲಿ ಹೋಗಬಹುದು.. ಇನ್ನು ಶಿವಾಜಿ ಸಾಮ್ರಾಜ್ಯವನ್ನು ಸಿನಿಮಾ ಮೂಲಕ ಕಣ್ಣಿಗೆ ಕಾಣುವಂತೆ ಬಿಚ್ಚಿಡೋದಕ್ಕೆ, ಅಲ್ಲೊಂದು ಬೃಹತ್ ಥಿಯೇಟರ್ ಕೂಡ ಇರುತ್ತದೆ. ಶಿವಾಜಿ ಕಾಲದ, ಕಲೆ ಮತ್ತು ಸಂಸ್ಕೃತಿಯ ಅನಾವರಣಕ್ಕಾಗಿ, ಮತ್ತೊಂದು ಬಯಲು ರಂಗಮಂದಿರವಿರುತ್ತದೆ. ಸಾವಿರಾರು ಮಂದಿ ಕುಳಿತುಕೊಳ್ಳಲು ಅಲ್ಲಿ, ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಇವೆಲ್ಲದರ ನಡುವೇನೇ, ಗ್ರಾನೈಟ್ ಕಲ್ಲುಗಳು ಮತ್ತು ಕಾಂಕ್ರಿಟ್‌ನಿಂದ, ಸಮುದ್ರರಾಜನಂತೆ ಶಿವಾಜಿ ಮಹಾರಾಜ್ ವಿರಾಜಮಾನವಾಗಿ ರಾರಾಜಿಸುತ್ತಾನೆ. ಇನ್ನು ಇಷ್ಟೆಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಿಸಲಾಗ್ತಿರೋ ಈ ಪ್ರದೇಶಕ್ಕೆ ಗಾಳಿಯಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ.

ಇದಕ್ಕಾಗಿ ಬರೋಬ್ಬರಿ ೨ ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಜಗತ್ತಿನ ಅತಿ ಎತ್ತರದ ಪ್ರತಿಮೆ ಅರಬ್ಬೀ ಸಮುದ್ರದ ಮಡಿಲಲ್ಲಿ ತಲೆ ಎತ್ತಲಿದೆ. ಈ ಶಿವಾಜಿ ಪ್ರತಿಮೆ ನಿರ್ಮಾಣ ಮಾಡುವುದು ಒಂದು ಸವಾಲಿನ ಕೆಲಸ. ಇದೇ ಕಾರಣಕ್ಕಾಗಿ ಶಿವಾಜಿಯ ಇತಿಹಾಸವಿರುವ ನೆಲ್ಲದಲ್ಲಿ ಶಿವಾಜಿಯ ಅತಿ ಎತ್ತರದ ಪ್ರತಿಮೆ ನಿರ್ಮಾಣ ಮಾಡೋ ಮೂಲಕ, ಮಹಾರಾಷ್ಟ್ರ ಮಣ್ಣಲ್ಲಿ ಶಿವಾಜಿಯನ್ನು ಶಾಶ್ವತವಾಗಿ ಎದ್ದುನಿಲ್ಲುವಂತೆ ಮಾಡಲಾಗ್ತಿದೆ. ಇದಕ್ಕೆ ಈಗಾಗ್ಲೇ ರೂಪು ರೇಷೆಗಳು ಸಿದ್ಧವಾಗಿದೆ.

ಇನ್ನು ಈ ಶಿವಾಜಿ ಪ್ರತಿಮೆಯನ್ನು ೨೦೧೯ರೊಳಗೆ ನಿರ್ಮಿಸುವ ಯೋಜನೆ ಇದೆ. ನೂರಾರು ಕಿ.ಮೀ. ದೂರದಲ್ಲಿರುವ ಉಗ್ರರ ಸುಳಿವು ಪತ್ತೆ ಹಚ್ಚಬಲ್ಲ ಆಂಟಿ ರಡಾರ್ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಭದ್ರತಾ ದಳ, ಮುಂಬೈ ಪೊಲೀಸ್ ಪಡೆ ಕೂಡ ಶಿವಾಜಿಯನ್ನು ಕಾಯುತ್ತಾರೆ. ಇವೆಲ್ಲದರ ಜೊತೆಗೆ ಹೆಜ್ಜೆ ಹೆಜ್ಜೆಗೂ ಸಿಸಿಟಿವಿಗಳನ್ನು ಕೂಡ ಅಳವಡಿಸಲಾಗುತ್ತದೆ. ಪರ್ಮನೆಂಟ್ ಬಂಕರ್‌ಗಳನ್ನು ನಿರ್ಮಿಸಲಿದ್ದು, ಸಮುದ್ರ ರಾಜನ ರಕ್ಷಣೆಗೆ, ಅತ್ಯಾಧುನಿಕ ಭದ್ರತೆಯನ್ನು ಕಲ್ಪಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ೨೦೧೯ ರೊಳಗೆ, ಜಗತ್ತಿನ ಅತಿ ಎತ್ತರದ ಪ್ರತಿಮೆ ಮುಂಬೈನ ಅರಬ್ಬಿ ಸಮುದ್ರದಲ್ಲಿ ತಲೆ ಎತ್ತಲಿದೆ. ಸ್ವಾಭಿಮಾನದ ಸಂಕೇತವಾಗಿ ಆಕಾಶದೆತ್ತರದಲ್ಲಿ ಶಿವಾಜಿ ಎದ್ದು ನಿಲ್ಲಲಿದ್ದಾರೆ.

Write A Comment