ರಾಷ್ಟ್ರೀಯ

ಬಿಸಿಯೂಟಕ್ಕೆ ಹಾಲು ಮೊಟ್ಟೆ: ಶಾಲಾಮಕ್ಕಳ ಪೌಷ್ಠಿಕತೆ ಹೆಚ್ಚಳಕ್ಕೆ ಕೇಂದ್ರದ ಚಿಂತನೆ

Pinterest LinkedIn Tumblr

milk-egg-1ನವದೆಹಲಿ, ಮೇ ೯ – ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟಕ್ಕೆ ಇನ್ನು ಮುಂದೆ ಮೊಟ್ಟೆ, ಬಾಳೆಹಣ್ಣು, ಹಾಲು ಸೇರ್ಪಡೆಯಾಗಲಿವೆ. ದೇಶದಾದ್ಯಂತ ಸುಮಾರು 11 ಕೋಟಿ ಶಾಲಾ ಮಕ್ಕಳಿಗೆ ಪ್ರತಿನಿತ್ಯ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗುತ್ತಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಏಳು ವರ್ಷಗಳ ನಂತರ ಆಹಾರ ನಿಯಮಗಳನ್ನು ಪರಿಷ್ಕರಿಸಿದೆ. 1995 ರಿಂದ ಜಾರಿಗೆ ಬಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ, ಇದೇ ಮೊದಲ ಬಾರಿಗೆ ಆಹಾರ ಧಾನ್ಯಗಳ ಪೂರೈಕೆಗಿದ್ದ ನಿಯಮಗಳನ್ನು ಪರಿಷ್ಕರಿಸಲಾಗಿದೆ.
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶಿಶು ವಿಭಾಗದ ಮುಖ್ಯಸ್ಥ ವಿನೋದ್ ಪಾಲ್ ನೇತೃತ್ವದ ಸಮಿತಿ, ಶಾಲಾ ಮಕ್ಕಳಿಗೆ ಪೂರೈಸುತ್ತಿರುವ ಮಧ್ಯಾಹ್ನದ ಊಟಕ್ಕೆ ಮೊಟ್ಟೆ, ಬಾಳೆಹಣ್ಣು, ಹಾಲು, ಹಾಲು ಉತ್ಪನ್ನಗಳನ್ನು ನೀಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಶಾಲಾ ಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳ ಪ್ರಮಾಣವನ್ನು ಕಡಿತಗೊಳಿಸಬೇಕು. ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡುತ್ತಿರುವ ತಲಾ 100 ಗ್ರಾಂ ಧಾನ್ಯಗಳ ಬದಲಿಗೆ 90 ಗ್ರಾಂ ನಷ್ಟು ನೀಡಬೇಕು, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡುತ್ತಿರುವ 150 ಗ್ರಾಂಗಳನ್ನು 100 ಗ್ರಾಂಗಳಿಗೆ ತಗ್ಗಿಸಬೇಕು ಎಂದೂ ಸಮಿತಿ ಶಿಫಾರಸ್ಸು ಮಾಡಿದೆ.
ಪರಿಷ್ಕೃತ ಆಹಾರ ಪದಾರ್ಥಗಳನ್ನು ಒದಗಿಸಲು ಸರ್ಕಾರದ ಬಳಿ ಸಾಕಷ್ಟು ಹಣ ಇದೆಯೇ ಎಂದು ಹಲವು ತಜ್ಞರು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಸಮಿತಿ, ಅಕ್ಕಿ ಹಾಗೂ ಗೋಧಿ ಸಬ್ಸಿಡಿ ದರದಲ್ಲಿ ದೊರೆಯಲಿರುವುದರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಖರ್ಚು ಮಾಡುವ ಹಣದ ಪೈಕಿ ಸುಮಾರು 600 ಕೋಟಿ ರೂ. ಉಳಿತಾಯವಾಗಲಿದೆ ಎಂದು ಹೇಳಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಂದು ಕೆಜಿ ಅಕ್ಕಿ 3 ರೂ.ಗಳಿಗೆ, ಒಂದು ಕೆಜಿ ಗೋಧಿ 2 ರೂ.ಗಳ ಸಬ್ಸಿಡಿ ದರದಲ್ಲಿ ದೊರೆಯುತ್ತಿವೆ ಎಂದು ಸಮಿತಿ ಹೇಳಿದೆ.
ಅಡುಗೆ ತಯಾರಿಕಾ ವೆಚ್ಚದಲ್ಲೂ ಏರಿಕೆಯಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ವೆಚ್ಚವನ್ನು ಪರಿಷ್ಕರಣೆ ಮಾಡಬೇಕೆಂದು ಸಮಿತಿ ತಿಳಿಸಿದೆ.
ಎಣ್ಣೆ ಅಥವಾ ಕೊಬ್ಬಿನಾಂಶಗಳಿರುವ ಪದಾರ್ಥಗಳ ಪೂರೈಕೆ ಪ್ರಮಾಣವೂ ಹೆಚ್ಚಾಗಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡುತ್ತಿರುವ 5 ಗ್ರಾಂಗಳನ್ನು 10 ಗ್ರಾಂಗಳಿಗೆ ಏರಿಸಬೇಕು, ಹಿರಿಯ ಪ್ರಾಥಮಿಕ ಮಕ್ಕಳಿಗೆ ನೀಡುವ ಪ್ರಮಾಣವನ್ನು 10 ಗ್ರಾಂಗಳಿಂದ 15 ಗ್ರಾಂಗಳಿಗೆ ಹೆಚ್ಚಿಸಬೇಕೆಂದೂ ಹೇಳಲಾಗಿದೆ.
ತರಕಾರಿ ಹಾಗೂ ದ್ವಿದಳ ಧಾನ್ಯಗಳ ಪೂರೈಕೆ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Write A Comment