ಮನೋರಂಜನೆ

ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಅಬ್ಬರಕ್ಕೆ ತಡೆ ಒಡ್ಡಿದ ರೈಸಿಂಗ್ ಪುಣೆ

Pinterest LinkedIn Tumblr

ajinkya-rahane-

ನವದೆಹಲಿ: ಶಿಸ್ತುಬದ್ಧ ಬೌಲಿಂಗ್ ಮಾಡಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ ತಂಡವು ಗುರುವಾರ ರಾತ್ರಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಅಬ್ಬರಕ್ಕೆ ತಡೆ ಒಡ್ಡಿತು.

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಆತಿಥೇಯ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 162 ರನ್‌ಗಳ ಮೊತ್ತ ಗಳಿಸಿತು.

ನಂತರ ಗುರಿಯ ಬೆನ್ನತ್ತಿದ ರೈಸಿಂಗ್ ಪುಣೆ ತಂಡವು ಪತ್ರಿಕೆಯು ಮುದ್ರಣಕ್ಕೆ ಹೋಗುವ ವೇಳೆಗೆ 8 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 59 ರನ್ ಗಳಿಸಿತ್ತು.

ಟಾಸ್ ಗೆದ್ದ ಪುಣೆ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಜಹೀರ್ ಖಾನ್ ಬದಲಿಗೆ ತಂಡದ ಸಾರಥ್ಯ ವಹಿಸಿದ್ದ ಜೆ.ಪಿ. ಡುಮಿನಿ ನಾಯಕತ್ವದ ಡೇರ್‌ಡೆವಿಲ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ.

ಆರಂಭಿಕ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೂರನೇ ಓವರ್‌ನಲ್ಲಿ ಆಶೋಕ್ ದಿಂಡಾ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಕ್ವಿಂಟನ್ ಡಿ ಕಾಕ್ ಅವರ ಬದಲಿಗೆ ಪಂತ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ (20 ರನ್ ) ಮತ್ತು ಕರುಣ್ ನಾಯರ್ (32; 23ಎ, 5ಬೌಂ) ಎರಡನೇ ವಿಕೆಟ್ ಜೊತೆಯಾಟದಲ್ಲಿ 35 ರನ್ ಸೇರಿಸಿದರು. ಆರನೇ ಓವರ್‌ನಲ್ಲಿ ಮಿಂಚಿದ ಬೌಲರ್ ಸ್ಕಾಟ್ ಬೊಲಾಂಡ್ ಎಸೆತವನ್ನು ಹೊಡೆದ ಸ್ಯಾಮ್ಸನ್ ಅವರು ಆರ್‌ . ಅಶ್ವಿನ್‌ಗೆ ಕ್ಯಾಚಿತ್ತರು.

ನಂತರ ಕ್ರೀಸ್‌ಗೆ ಬಂದ ನಾಯಕ ಡುಮಿನಿ ತಂಡಕ್ಕೆ ಚೇತರಿಕೆ ನೀಡುವ ಕಾರ್ಯ ಮಾಡಿದರು. ತಮ್ಮ ಬಿರುಸಿನ ಹೊಡೆತಗಳ ಮೂಲಕ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂತಸದ ಅಲೆ ಏಳುವಂತೆ ಮಾಡಿದರು. ಆದರೆ, ಹತ್ತನೇ ಓವರ್‌ನಲ್ಲಿ ಕರುಣ್ ನಾಯರ್ ಔಟಾದರು.

ಆದರೂ ಎದೆಗುಂದದ ಡುಮಿನಿ ಅವರು ಸ್ಯಾಮ್ ಬಿಲ್ಲಿಂಗ್ಸ್ (24 ರನ್) ಅವರೊಂದಿಗೆ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 45 ರನ್‌ಗಳನ್ನು ಸೇರಿಸಿದರು. ತಂಡವು ನೂರರ ಗಡಿ ದಾಟಿತು. ರಜತ್ ಭಾಟಿಯಾ ಎಸೆತದಲ್ಲಿ ಅಜಿಂಕ್ಯ ರಹಾನೆ ಪಡೆದ ಕ್ಯಾಚ್‌ಗೆ ಬಿಲ್ಲಿಂಗ್ಸ್‌ ನಿರ್ಗಮಿಸಿದರು.

ಕಾರ್ಲೋಸ್ ಬ್ರಾಥ್‌ವೈಟ್‌ ಮೂರು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ನೆರವಾಗುವ ಭರವಸೆ ಮೂಡಿಸಿದ್ದರು. ಆದರೆ, ಅವರ ಆರ್ಭಟಕ್ಕೆ ಸ್ಕಾಟ್ ಬೊಲಾಂಡ್ ಅವರು 17ನೇ ಓವರ್‌ನಲ್ಲಿ ಕಡಿವಾಣ ಹಾಕಿದರು. ನಂತರದ ಓವರ್‌ನಲ್ಲಿ ಡುಮಿನಿ ಅವರು ರನ್‌ಔಟ್ ಆದರು. ಅದಕ್ಕೆ ಅಜಿಂಕ್ಯ ರಹಾನೆ ಅವರ ಚುರುಕಾದ ಫೀಲ್ಡಿಂಗ್ ಮತ್ತು ಮಿಂಚಿನ ವೇಗದ ಥ್ರೋ ಕಾರಣವಾಯಿತು.

ಸ್ಥಳೀಯ ಆಟಗಾರ ಪವನ್ ನೇಗಿ (ಔಟಾಗದೆ19 ರನ್) ಕೂಡ ಅಲ್ಪ ಕಾಣಿಕೆ ನೀಡಿದರು. ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆಯುವ ಮೂಲಕ ನೇಗಿ ತಂಡದ ಮೊತ್ತವು 150ರ ಗಡಿ ದಾಟಲು ಕಾರಣರಾದರು.

ಆದರೆ, ಈ ಪಂದ್ಯದಲ್ಲಿಯೂ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಮತ್ತು ಎಂ. ಅಶ್ವಿನ್ ಅವರ ಮೋಡಿಯ ಆಟ ನಡೆಯಲಿಲ್ಲ. ಅದರಲ್ಲೂ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ಲೈನ್‌ ಮತ್ತು ಲೆಂಗ್ತ್‌ ಕಾಪಾಡಿಕೊಳ್ಳಲು ಪರದಾಡಿದರು.

ತಲಾ ಎರಡು ವಿಕೆಟ್ ಗಳಿಸಿದ ರಜತ್ ಭಾಟಿಯಾ ಮತ್ತು ಸ್ಕಾಟ್ ಬೊಲಾಂಡ್ ಗಮನ ಸೆಳೆದರು.
ತಿಸಾರ ಪೆರೆರಾ ಒಂದು ಓವರ್ ಬೌಲಿಂಗ್ ಮಾಡಿ ಒಂಬತ್ತು ರನ್‌ ನೀಡಿದರು.

ಸ್ಕೋರ್‌ಕಾರ್ಡ್‌
ಡೆಲ್ಲಿ ಡೇರ್‌ಡೆವಿಲ್ಸ್ 7 ಕ್ಕೆ 162 (20 ಓವರ್‌ಗಳಲ್ಲಿ)

ರಿಷಭ್ ಪಂತ್ ಬಿ ಅಶೋಕ್ ದಿಂಡಾ 02
ಸಂಜು ಸ್ಯಾಮ್ಸನ್ ಸಿ ರವಿಚಂದ್ರನ್ ಅಶ್ವಿನ್ ಬಿ ಬೊಲಾಂಡ್ 20
ಕರುಣ್ ನಾಯರ್ ಸಿ ತಿಸಾರ ಪೆರೆರಾ ಬಿ ರಜತ್ ಭಾಟಿಯಾ 32
ಜೆ.ಪಿ. ಡುಮಿನಿ ರನ್‌ಔಟ್ (ರಹಾನೆ/ಮಹೇಂದ್ರಸಿಂಗ್ ದೋನಿ) 34
ಸ್ಯಾಮ್ ಬಿಲ್ಲಿಂಗ್ಸ್ ಸಿ ಅಜಿಂಕ್ಯ ರಹಾನೆ ಬಿ ರಜತ್ ಭಾಟಿಯಾ 24
ಕ್ರೇಗ್ ಬ್ರಾಥ್‌ವೈಟ್ ಸಿ ತಿಸಾರ ಪೆರೆರಾ ಬಿ ಬೊಲಾಂಡ್ 20
ಪವನ್ ನೇಗಿ ಔಟಾಗದೆ 19
ಜಯಂತ್ ಯಾದವ್ ರನ್‌ಔಟ್ (ಸೌರಭ್ ತಿವಾರಿ) 01
ಮೊಹಮ್ಮದ್ ಶಮಿ ಔಟಾಗದೆ 02
ಇತರೆ: (ಲೆಗ್‌ಬೈ 1, ವೈಡ್ 6, ನೋಬಾಲ್ 1) 08
ವಿಕೆಟ್‌ ಪತನ: 1–13 (ಪಂತ್; 2.4), 2–48 (ಸ್ಯಾಮ್ಸನ್; 5.6), 3–65 (ನಾಯರ್; 9.4), 4–110 (ಬಿಲ್ಲಿಂಗ್ಸ್; 14.4), 5–137 (ಬ್ರಾಥ್‌ವೈಟ್; 16.5), 6–138 (ಡುಮಿನಿ; 16.6), 7–143 (ಯಾದವ್; 17.5).
ಬೌಲಿಂಗ್‌: ಅಶೋಕ್ ದಿಂಡಾ 4–0–34–1 (ನೋಬಾಲ್ 1, ವೈಡ್ 1), ತಿಸಾರ ಪೆರೆರಾ 1–0–9–0, ಸ್ಕಾಟ್ ಬೊಲಾಂಡ್ 4–0–31–2, ಆರ್. ಅಶ್ವಿನ್ 4–0–34–0 (ವೈಡ್ 3), ರಜತ್ ಭಾಟಿಯಾ 4–0–22–2 (ವೈಡ್ 2), ಮುರುಗನ್ ಅಶ್ವಿನ್ 3–0–31–0

Write A Comment