ಮನೋರಂಜನೆ

ಬಲಿಷ್ಠ ಗುಜರಾತ್‌ ಲಯನ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಡೆಲ್ಲಿ ಡೇರ್‌ಡೆವಿಲ್ಸ್‌

Pinterest LinkedIn Tumblr

delhi

ರಾಜ್‌ಕೋಟ್‌ : ಆರಂಭಿಕ ಆಟಗಾರರಾದ ರಿಷಭ್‌ ಪಂತ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಅವರ ಶತಕದ ಜೊತೆ ಯಾಟದ ಬಲದಿಂದ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಬಲಿಷ್ಠ ಗುಜರಾತ್‌ ಲಯನ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು.

ಈ ಗೆಲುವಿನೊಂದಿಗೆ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ತರ ಬೇತು ಗೊಂಡಿರುವ ಡೇರ್‌ಡೆವಿಲ್ಸ್‌ ಒಟ್ಟು ಪಾಯಿಂಟ್ಸ್‌ ಅನ್ನು 10ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್‌ ಗೆದ್ದ ಜಹೀರ್ ಖಾನ್ ನೇತೃತ್ವದ ಡೆಲ್ಲಿ ತಂಡ ಫೀಲ್ಡಿಂಗ್ ಮಾಡಲು ಮುಂದಾಯಿತು.
ಟೂರ್ನಿಯ ಆರಂಭದ ಪಂದ್ಯದಿಂದಲೂ ಅಮೋಘ ಪ್ರದರ್ಶನ ನೀಡಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಲಯನ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಸುರೇಶ್ ರೈನಾ ನಾಯಕತ್ವದ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 149 ರನ್ ಕಲೆ ಹಾಕಿತು.

ಸವಾಲಿನ ಗುರಿಯನ್ನು ಡೆಲ್ಲಿ ತಂಡ 17.2 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಮುಟ್ಟಿತು.

ದಿಟ್ಟ ಆರಂಭ: ಗುರಿ ಬೆನ್ನಟ್ಟಿದ ದೆಹಲಿ ತಂಡಕ್ಕೆ ರಿಷಭ್‌ ಮತ್ತು ಡಿ ಕಾಕ್‌ ದಿಟ್ಟ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 8.51ರ ಸರಾಸರಿಯಲ್ಲಿ 115ರನ್‌ ಪೇರಿಸಿತು. ಲಯನ್ಸ್‌ ಬೌಲರ್‌ಗಳ ಬೆವರಿ ಳಿಸಿದ ಇವರಿಬ್ಬರು ಅಂಗಳದಲ್ಲಿ ಬೌಂ ಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು.

ಆರಂಭಿಕ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಡಲಿಳಿದ ರಿಷಭ್‌ ಮನ ಮೋಹಕ ಇನಿಂಗ್ಸ್‌ ಕಟ್ಟಿದರು.

18 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಕೇವಲ 40 ಎಸೆತಗಳಲ್ಲಿ 69ರನ್‌ ಗಳಿಸಿ ಮಿಂಚಿದರು. ರಿಷಭ್‌ ಬೌಂಡರಿ (9), ಸಿಕ್ಸರ್‌ಗಳ (2) ಮೂಲಕವೇ 48ರನ್‌ ಗಳಿಸಿದ್ದು ವಿಶೇಷ.

ಇನ್ನೊಂದೆಡೆ ಡಿ ಕಾಕ್‌ ತಾಳ್ಮೆಯ ಆಟ ಆಡಿದರು. ಅವರು 45 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 46ರನ್‌ ಕಲೆಹಾಕಿದರು.
ಇವರಿಬ್ಬರು ಔಟಾದ ಬಳಿಕ ಜೆ.ಪಿ. ಡುಮಿನಿ (ಔಟಾಗದೆ 13) ಮತ್ತು ಸಂಜು ಸ್ಯಾಮ್ಸನ್‌ (ಔಟಾಗದೆ 19) ಯಾವುದೇ ಅಪಾಯಕ್ಕೆ ಆಸ್ಪದ ನೀಡದ ಹಾಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಆಘಾತ: ಬ್ಯಾಟಿಂಗ್‌ ಆರಂಭಿಸಿದ ಲಯನ್ಸ್ ತಂಡಕ್ಕೆ ಪ್ರಮುಖ ಬ್ಯಾಟ್ಸ್‌ ಮನ್‌ಗಳ ವೈಫಲ್ಯ ಕಾಡಿತು. ಡ್ವೇನ್‌ ಸ್ಮಿತ್‌ (15) ರನ್ ಹೊಡೆದು ಔಟಾದರೆ, ಬ್ರೆಂಡನ್ ಮೆಕ್ಲಮ್‌ ಒಂದು ರನ್ ಗಳಿಸಿ ದ್ದಾಗ ಪೆವಿಲಿಯನ್‌ ಸೇರಿದರು. ಪ್ರಮುಖ ಬ್ಯಾಟ್ಸ್‌ಮನ್‌ ಆ್ಯರನ್ ಫಿಂಚ್‌ (5) ಕೂಡ ಇದೇ ಹಾದಿ ತುಳಿದರು.

ಆದ್ದರಿಂದ ಲಯನ್ಸ್‌ ಸಾಕಷ್ಟು ಪರದಾಟ ನಡೆಸಬೇಕಾಯಿತು. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ (24) ಮತ್ತು ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ದಿನೇಶ್‌ ಕಾರ್ತಿಕ್ (53, 43 ಎಸೆತ, 5 ಬೌಂಡರಿ) ಅರ್ಧಶತಕ ಬಾರಿಸಿ ಆಸರೆಯಾದರು. ರವೀಂದ್ರ ಜಡೇಜ (ಔಟಾಗದೆ 36) ತಂಡಕ್ಕೆ ನೆರವಾದರು. ಇದರಿಂದ ಲಯನ್ಸ್ ತಂಡಕ್ಕೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಗಲು ಸಾಧ್ಯವಾಯಿತು.

ಚುರುಕಿನ ಬೌಲಿಂಗ್: ಎಡಗೈ ವೇಗಿ ಜಹೀರ್, ಸ್ಪಿನ್ನರ್‌ ಅಮಿತ್‌ ಮಿಶ್ರಾ ಮತ್ತು ಡುಮಿನಿ ಚುರುಕಿನ ಬೌಲಿಂಗ್ ಮೂಲಕ ಲಯನ್ಸ್‌ ತಂಡದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು. ಶಹಬಾಜ್‌ ನದೀಮ್‌ ಎರಡು ವಿಕೆಟ್ ಪಡೆದು ಗಮನಸೆಳೆದರು.

ಸ್ಕೋರ್‌ಕಾರ್ಡ್‌

ಗುಜರಾತ್‌ ಲಯನ್ಸ್‌ 7 ಕ್ಕೆ 149 (20 ಓವರ್‌ಗಳಲ್ಲಿ)

ಡ್ವೇನ್ ಸ್ಮಿತ್‌ ಸಿ. ಕ್ರಿಸ್‌ ಮಾರಿಸ್‌ ಬಿ. ಶಹಬಾಜ್‌ ನದೀಮ್‌ 15
ಬ್ರೆಂಡನ್ ಮೆಕ್ಲಮ್‌ ಬಿ. ಜಹೀರ್ ಖಾನ್‌ 01
ಆ್ಯರನ್ ಫಿಂಚ್‌ ಸಿ. ರಿಷಭ್ ಪಂತ್‌ ಬಿ. ಶಹಬಾಜ್‌ ನದೀಮ್‌ 05
ಸುರೇಶ್ ರೈನಾ ಸ್ಟಂಪ್ಡ್ ಕ್ವಿಂಟನ್‌ ಡಿ ಕಾಕ್ ಬಿ. ಅಮಿತ್‌ ಮಿಶ್ರಾ 24
ದಿನೇಶ್‌ ಕಾರ್ತಿಕ್ ಬಿ. ಮಹಮ್ಮದ್ ಶಮಿ 53
ರವೀಂದ್ರ ಜಡೇಜ ಔಟಾಗದೆ 36
ಜೇಮ್ಸ್‌ ಫಾಕ್ನರ್ ಬಿ. ಕ್ರಿಸ್‌ ಮಾರಿಸ್‌ 07
ಇಶಾನ್‌ ಕಿಶನ್‌ ರನ್ ಔಟ್‌ (ಬಿಲ್ಲಿಂಗ್ಸ್‌/ಕ್ವಿಂಟನ್‌) 02
ಇತರೆ: (ಲೆಗ್ ಬೈ–3, ವೈಡ್‌–3) 06

ವಿಕೆಟ್‌ ಪತನ: 1–17 (ಮೆಕ್ಲಮ್‌; 2.5). 2–17 (ಸ್ಮಿತ್‌; 3.1), 3–24 (ಫಿಂಚ್‌; 3.6), 4–75 (ರೈನಾ; 10.6), 5–127 (ಕಾರ್ತಿಕ್‌; 17.3). 6–138 (ಫಾಕ್ನರ್‌; 18.6), 7–149 (ಇಶಾನ್‌; 19.6).
ಬೌಲಿಂಗ್‌: ಶಹಬಾಜ್‌ ನದೀಮ್‌ 3–0–23–2, ಕ್ರಿಸ್‌ ಮಾರಿಸ್‌ 4–0–32–1, ಜಹೀರ್ ಖಾನ್‌ 4–0–27–1, ಮಹಮ್ಮದ್ ಶಮಿ 4–0–31–1, ಅಮಿತ್‌ ಮಿಶ್ರಾ 3–0–19–1, ಜೆ.ಪಿ ಡುಮಿನಿ 2–0–14–0.
ಡೆಲ್ಲಿ ಡೇರ್‌ಡೆವಿಲ್ಸ್‌ 2 ಕ್ಕೆ 150 (17.2 ಓವರ್‌ಗಳಲ್ಲಿ)

ಕ್ವಿಂಟನ್‌ ಡಿ ಕಾಕ್‌ ಸಿ ಡ್ವೇನ್‌ ಸ್ಮಿತ್‌ ಬಿ ಶಿವಿಲ್‌ ಕೌಶಿಕ್‌ 46
ರಿಷಭ್‌ ಪಂತ್‌ ಸಿ ದಿನೇಶ್‌ ಕಾರ್ತಿಕ್‌ ಬಿ ರವೀಂದ್ರ ಜಡೇಜ 69
ಸಂಜು ಸ್ಯಾಮ್ಸನ್‌ ಔಟಾಗದೆ 19
ಜೆಪಿ ಡುಮಿನಿ ಔಟಾಗದೆ 13
ಇತರೆ:( ಲೆಗ್‌ ಬೈ–1, ವೈಡ್‌–1, ನೋಬಾಲ್‌ 1 ) 03

ವಿಕೆಟ್‌ ಪತನ: 1–115 (ರಿಷಭ್‌; 13.3), 2–121 (ಡಿ ಕಾಕ್‌; 14.5).
ಬೌಲಿಂಗ್‌: ಪ್ರವೀಣ್‌ ಕುಮಾರ್‌ 2–0–20–0, ಧವಳ್‌ ಕುಲಕರ್ಣಿ 2–0–24–0, ಸುರೇಶ್‌ ರೈನಾ 4–0–34–0, ಶಿವಿಲ್‌ ಕೌಶಿಕ್‌ 4–0–29–1, ಡ್ವೇನ್‌ ಸ್ಮಿತ್‌ 2–0–12–0, ಜೇಮ್ಸ್‌ ಫಾಕ್ನರ್‌ 1–0–9–0, ರವೀಂದ್ರ ಜಡೇಜ 2.2–0–21–1.
ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ 8 ವಿಕೆಟ್‌ ಗೆಲುವು
ಪಂದ್ಯಶ್ರೇಷ್ಠ: ರಿಷಭ್‌ ಪಂತ್‌.

Write A Comment