ರಾಷ್ಟ್ರೀಯ

ಆನ್‌ಲೈನ್‌ ಕಲಿಕೆಯಲ್ಲಿ ಬೆಂಗಳೂರು ಅಗ್ರ: ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿ ಭಾರತ: ಅಧ್ಯಯನ ವರದಿ

Pinterest LinkedIn Tumblr

E-dlfkjdlfjdನವದೆಹಲಿ: ಆನ್‌ಲೈನ್ ಕಲಿಕೆಗೆ ಬೆಂಗಳೂರಿನಲ್ಲಿ ಅತಿಹೆಚ್ಚು ಮಂದಿ ನೋಂದಣಿಯಾಗಿದ್ದು, ದೇಶದಲ್ಲೇ ಅಗ್ರಸ್ಥಾನ ದೊರೆತಿದೆ. ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದೆ.
ಮುಂಬೈ, ಚೆನ್ನೈ ಮತ್ತು ಹೈದರಾಬಾದ್‌ ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದಿವೆ ಎಂಬುದು ಪ್ರಮುಖ ಆನ್‌ಲೈನ್‌ ಕಲಿಕಾ ವೆಬ್‌ಸೈಟ್‌ ‘ಕೋರ್ಸೆರಾ’ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ಮೂರನೇ ಅತಿದೊಡ್ಡ ಆನ್‌ಲೈನ್‌ ಕಲಿಕಾ ದೇಶ ಎಂಬ ಗೌರವ ಭಾರತಕ್ಕೆ ದೊರೆತಿದೆ. ಭಾರತದಲ್ಲಿ ಒಟ್ಟು 13 ಲಕ್ಷ ಮಂದಿ ಆನ್‌ಲೈನ್‌ ಮೂಲಕ ಕಲಿಯುತ್ತಿದ್ದಾರೆ. ಅಮೆರಿಕ ಮತ್ತು ಚೀನಾ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದಲ್ಲಿ ಆನ್‌ಲೈನ್‌ ಕಲಿಕೆಗೆ ಹೆಸರು ನೋಂದಾಯಿಸಿದವರ ಪ್ರಮಾಣದಲ್ಲಿ ಶೇ 70 ರಷ್ಟು ಹೆಚ್ಚಳ ಕಂಡುಬಂದಿದೆ.
‘ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಆನ್‌ಲೈನ್‌ ಕಲಿಕೆಗೆ ಹೆಸರು ನೋಂದಾಯಿಸುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆನ್‌ಲೈನ್‌ ಕೋರ್ಸ್‌ಗಳ ಜನಪ್ರಿಯತೆ ಕೂಡಾ ಹೆಚ್ಚುತ್ತಿದೆ. ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಕಂಡುಕೊಳ್ಳಲು ಜನರು ಆನ್‌ಲೈನ್‌ ಕಲಿಕೆಯ ಮೊರೆ ಹೋಗುತ್ತಿದ್ದಾರೆ. ಇಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಅದೇ ರೀತಿ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಶಿಕ್ಷಣ ಪಡೆಯಲು ಸಾಧ್ಯ’ ಎಂದು ಕೋರ್ಸೆರಾದ ಸಿಇಒ ರಿಕ್‌ ಲೆವಿನ್‌ ಹೇಳಿದ್ದಾರೆ.
ಭಾರತದಲ್ಲಿ ಆನ್‌ಲೈನ್‌ ಕಲಿಕೆಗೆ ಹೆಸರು ನೋಂದಾಯಿಸಿದವರಲ್ಲಿ ಅರ್ಧದಷ್ಟು ಮಂದಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಅಧ್ಯಯನ ಮಾಡುತ್ತಿದ್ದಾರೆ.
‘ಕಂಪ್ಯೂಟರ್‌ ಸೈನ್ಸ್‌ (ಶೇ 25) ಮತ್ತು ಡಾಟಾ ಸೈನ್ಸ್‌ (ಶೇ 18) ಸೇರಿದಂತೆ ತಂತ್ರಜ್ಞಾನ ಕೋರ್ಸ್‌ಗಳನ್ನು ಕಲಿಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎರಡು ವಿಷಯಗಳು ಭಾರತದಲ್ಲಿ ಮಾತ್ರ ಭಾರಿ ಜನಪ್ರಿಯತೆ ಹೊಂದಿವೆ’ ಎಂದು ಅವರು ತಿಳಿಸಿದ್ದಾರೆ.
‘ವಾಣಿಜ್ಯೋದ್ಯಮಿಗಳು ಮತ್ತು 20 ರಿಂದ 30 ವರ್ಷದೊಳಗಿನ ಯುವ ಉದ್ಯಮಿಗಳು ಆನ್‌ಲೈನ್‌ ಕಲಿಕೆಯಲ್ಲಿ ಸಕ್ರಿಯರಾಗಿದ್ದಾರೆ. ವೃತ್ತಿಗೆ ಸಂಬಂಧಿಸಿದಂತೆ ಇನ್ನಷ್ಟು ತಾಂತ್ರಿಕ ಕೌಶಲ ಬೆಳೆಸಿಕೊಳ್ಳುವುದು ಇದರ ಉದ್ದೇಶ’ ಎಂದು ಲೆವಿನ್‌ ಹೇಳಿದ್ದಾರೆ.
****
13 ಲಕ್ಷ -ಭಾರತದಲ್ಲಿ ಆನ್‌ಲೈನ್‌ ಕಲಿಕೆಯಲ್ಲಿ ತೊಡಗಿಸಿಕೊಂಡವರು
25%- ಕಂಪ್ಯೂಟರ್‌ ಸೈನ್ಸ್‌ ವಿಷಯ ಕಲಿಯುತ್ತಿರುವವರ ಪ್ರಮಾಣ

Write A Comment