ರಾಷ್ಟ್ರೀಯ

ಉ.ಖಂಡ ಭೀಕರ ಕಾಡ್ಗಿಚ್ಚಿನ ಹಿಂದೆ ಮರಗಳ್ಳ ಮಾಫಿಯಾ ಕೈವಾಡ!

Pinterest LinkedIn Tumblr

Rudraprayag: A fire that broke out in forests near Rudraprayag of Uttarakhand on April 30, 2016. (Photo: IANS)

ಡೆಹ್ರಾಡೂನ್: ಕಳೆದ 88 ದಿನಗಳ ಹಿಂದ ಉತ್ತರಾಖಂಡ ರಾಜ್ಯದ ನೈನಿಟಾಲ್ ನ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅವರಿಸಿರುವ ಕಾಡ್ಗಿಚ್ಚು ತಹಬದಿಗೆ ಬರುವ ಯಾವುದೇ ಲಕ್ಷಣಗಳೂ ತೋರುತ್ತಿಲ್ಲ.

ಉತ್ತರಾ ಖಂಡದ ಪೌರಿ, ಟೆಹ್ರಿ ಮತ್ತು ನೈನಿಟಾಲ್‌ ಸೇರಿದಂತೆ ಸುಮಾರು 7 ಜಿಲ್ಲೆಗಳ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಉಂಟಾಗಿರುವ ಕಾಡ್ಗಿಚ್ಚು ನಿಯಂತ್ರಣಕ್ಕೆ ಎನ್ ಡಿಆರ್ ಎಫ್ ಸಿಬ್ಬಂದಿ ಸೇರಿದಂತೆ ಸುಮಾರು 6 ಸಾವಿರ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದರೂ ಬೆಂಕಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಈಗಾಗಲೇ ಸುಮಾರು 2,270 ಹೆಕ್ಟೇರ್‌ ಅರಣ್ಯ ಪ್ರದೇಶ ಭಸ್ಮವಾಗಿದ್ದು, ಬೆಂಕಿ ವೇಗವಾಗಿ ಪಸರಿಸುತ್ತಿರುವುದರಿಂದ ಬೆಂಕಿ ಮತ್ತಷ್ಟು ವೇಗವಾಗಿ ಇತರೆ ಪ್ರದೇಶಗಳಿಗೆ ಹಬ್ಬುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಬೆಂಕಿ ನಂದಿಸಲು ಭಾರತೀಯ ವಾಯು ಸೇನೆಯ ಮಿಗ್ 147 ಹೆಲಿಕಾಪ್ಟರ್ ಮೂಲಕ ಕಾಡ್ಗಿಚ್ಚು ಹೊತ್ತಿರುವ ಅರಣ್ಯ ಪ್ರದೇಶಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹಾಕುತ್ತಿದ್ದರೂ ಕೂಡ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಎಣ್ಣೆಯ ಅಂಶ ಇರುವ ಪೈನ್‌ ಮತ್ತು ನಾಗಸಂಪಿಗೆ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬೆಂಕಿ ವೇಗವಾಗಿ ಪ್ರಸರಿಸುತ್ತಿದ್ದು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಬೆಂಕಿ ನಂದಿಸುವ ಕಾರ್ಯದಲ್ಲಿ ಎನ್ ಡಿಆರ್ ಎಫ್ ನ ಸುಮಾರು 135 ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಮತ್ತು ಅರಣ್ಯ ಇಲಾಖೆಯ ಒಟ್ಟು 6 ಸಾವಿರ ಸಿಬ್ಬಂದಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರಸ್ತುತ ಇಸ್ರೋದ ವೈಮಾನಿಕ ಸಮೀಕ್ಷೆ ಪ್ರಕಾರ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಬ್ಬಿರುವ ಕಾಡ್ಗಿಚ್ಚು ಇನ್ನೂ 53 ಕಡೆಗಳಲ್ಲಿ ಸಕ್ರಿಯವಾಗಿದ್ದು, ಕೆಲವೆಡೆ 800-1000 ಡಿಗ್ರಿ ಉಷ್ಣಾಂಶದವರೆಗೂ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿದೆ. ಹೀಗಾಗಿ ಕಾಡ್ಗಿಚ್ಚನ್ನು ಹೀಗೆಯೇ ಮುಂದುವರೆಯಲು ಬಿಟ್ಟರೆ ಮತ್ತಷ್ಟು ಅರಣ್ಯ ಪ್ರದೇಶ ನಾಶವಾಗುವ ಭೀತಿ ಇದೆ ಎಂದು ಇಸ್ರೋ ಎಚ್ಚರಿಕೆ ನೀಡಿದೆ.

ಕಾಡ್ಗಿಚ್ಚಿನ ಹಿಂದೆ ಮರಗಳ್ಳ ಮಾಫಿಯಾ
ಇದೇ ವೇಳೆ ಭೀಕರ ಕಾಡ್ಗಿಚ್ಚಿನ ಹಿಂದೆ ಉತ್ತರಾಖಂಡದ ಮರಗಳ್ಳ ಮಾಫಿಯಾದ ಕೈವಾಡದ ಕುರಿತು ಶಂಕೆವ್ಯಕ್ತವಾಗುತ್ತಿದೆ. ಮರಗಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಕಳ್ಳರೇ ಅರಣ್ಯದ ಒಂದು ಭಾಗಕ್ಕೆ ಬೆಂಕಿ ಹಚ್ಚಿ ಸಿಬ್ಬಂದಿಗಳ ಗಮನ ಕಾಡ್ಗಿಚ್ಚಿನ ಮೇಲೆ ಬರುವಂತೆ ಮಾಡಿದ್ದಾರೆ ಎಂದೂ ಶಂಕಿಸಲಾಗಿದೆ. ಆದರೆ ಪ್ರಸ್ತುತ ಉತ್ತರಾಖಂಡ ಸರ್ಕಾರ ಮೊದಲು ಕಾಡ್ಗಿಚ್ಚಿನ್ನು ತಹಬದಿಗೆ ತರಲು ನಿರ್ಧರಿಸಿದ್ದು, ಆ ಬಳಿಕವಷ್ಟೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ಇನ್ನು ಕೇಂದ್ರ ಸರ್ಕಾರ ಕೂಡ ಉತ್ತರಾಖಂಡ ಸರ್ಕಾರದಿಂದ ಮಾಹಿತಿ ಪಡೆದಿದ್ದು, ಕಾಡ್ಗಿಚ್ಚು ಪ್ರಕರಣ ಸಂಬಂಧ ಸಕಲ ರೀತಿಯ ನೆರವು ನೀಡಲು ಸಿದ್ಧವಾಗಿದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು, ಕಾಡ್ಗಿಚ್ಚನ್ನು ತಹಬದಿಗೆ ತರಲು ಎಲ್ಲ ರೀತಿಯ ಕ್ರಮಗಳನ್ನು ಕೊಗೊಳ್ಳಲಾಗಿದೆ. ವಾಯು ಸೇನೆ ಮಿಗ್ ಹೆಲಿಕಾಪ್ಟರ್ ಮತ್ತು 135 ಮಂದಿ ಎನ್ ಡಿಆರ್ ಎಫ್ ಸಿಬ್ಬಂದಿ ಮತ್ತು 6000 ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾರ್ಯಾಚರಣೆಗಾಗಿ ಈಗಾಗಲೇ ಕೇಂದ್ರ ಸರ್ಕಾರ ತುರ್ತಾಗಿ 5 ಕೋಟಿ ರು.ಹಣವನ್ನು ಉತ್ತರಾಖಂಡ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಅಂತೆಯೇ ಅಗ್ನಿ ಅವಘಡ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ಇಷ್ಟು ದೊಡ್ಡ ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಅಗ್ನಿ ವ್ಯಾಪಿಸಲು ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

Write A Comment