ರಾಷ್ಟ್ರೀಯ

ಕೋಲಾರ ಗಣಿ ಪುನಶ್ಚೇತನಕ್ಕೆ ಜೀವ; ಮುಖ್ಯಮಂತ್ರಿ ಜತೆ ಕೇಂದ್ರ ಗಣಿ ಸಚಿವ ಮಾತುಕತೆ: ಮುನಿಯಪ್ಪ

Pinterest LinkedIn Tumblr

gold-bar1ನವದೆಹಲಿ: ಮೇ 13ರಂದು ಸಂಸತ್ತಿನ ಬಜೆಟ್‌ ಅಧಿವೇಶನ ಮುಗಿದ ಬಳಿಕ ಕೋಲಾರ ಚಿನ್ನದ ಗಣಿ (ಬಿಜಿಎಂಎಲ್‌) ಪುನಶ್ಚೇತನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಜತೆ ಕೇಂದ್ರ ಗಣಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಾತುಕತೆ ನಡೆಸಲಿದ್ದಾರೆ.

‘ಕೇಂದ್ರ ಸರ್ಕಾರದ ಹೊಸ ಗಣಿ ನೀತಿ ಅನ್ವಯ, ಕಲ್ಲಿದ್ದಲು ಮತ್ತು ಸತುವು ಹೊರತುಪಡಿಸಿ ಉಳಿದ ಖನಿಜಗಳ ನಿಯಂತ್ರಣವು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡಲಿದೆ. ಹೀಗಾಗಿ ಬಿಜಿಎಂಎಲ್‌ ಪುನಶ್ಚೇತನ ಕುರಿತು ಕರ್ನಾಟಕ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಕೋಲಾರದ ಸಂಸದ ಕೆ.ಎಚ್. ಮುನಿಯಪ್ಪ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ಗಣಿ ಸಚಿವಾಲಯವು ಈಗಾಗಲೇ ಕರ್ನಾಟಕಕ್ಕೆ ಪತ್ರ ಬರೆದು ಚಿನ್ನದ ಗಣಿ ಪುನಶ್ಚೇತನ ಸಂಬಂಧ ಅಭಿಪ್ರಾಯ ಕೇಳಿದೆ. ಈ ಸಂಬಂಧ ಸಿದ್ದರಾಮಯ್ಯ ಅವರ ಜತೆ ತೋಮರ್‌ ಖುದ್ದು ಸಮಾಲೋಚನೆ ನಡೆಸಲಿದ್ದಾರೆ’ ಎಂದರು.

ಚಿನ್ನದ ಗಣಿ ಲಾಭದಾಯಕವಾಗಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಕೋಲಾರ ಗಣಿ ಮುಚ್ಚಿತ್ತು. ಅನಂತರ ರಾಜ್ಯ ಹೈಕೋರ್ಟ್‌ ಗಣಿ ಪುನರಾರಂಭಕ್ಕೆ ಆದೇಶಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ ಜಾಗತಿಕ ಟೆಂಡರ್‌ ಕರೆಯಲು ಸೂಚಿಸಿದೆ.

‘ಕಾರ್ಮಿಕರು ಹರಾಜಿನಲ್ಲಿ ಭಾಗವಹಿಸಿ ಹೆಚ್ಚು ಬಿಡ್ ಉಲ್ಲೇಖಿಸಿದರೆ ಅವಕಾಶ ಕೊಡಬಹುದೆಂದೂ ಹೇಳಿತು. ಯಾರಿಗೆ ಗುತ್ತಿಗೆ ಮಂಜೂರಾದರೂ ಕಾರ್ಮಿಕರ ಬಾಕಿ ₹ 52 ಕೋಟಿ ಪಾವತಿಸಬೇಕೆಂದು ಕೋರ್ಟ್‌ ಸೂಚಿಸಿದೆ. ಹಾಲಿ, ಮಾಜಿ ಕಾರ್ಮಿಕರು ವಾಸವಾಗಿರುವ ಮನೆಗಳನ್ನು ಅವರಿಗೇ ಮಂಜೂರು ಮಾಡಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ’ ಎಂದರು.

ಕೋಲಾರದಲ್ಲಿ ಚಿನ್ನದ ಗಣಿಗೆ ಸೇರಿದ 12 ಸಾವಿರ ಎಕರೆ ಭೂಮಿ ಇದೆ. ಗಣಿಯಲ್ಲಿ ಬೆವರು ಸುರಿಸಿರುವ ಕಾರ್ಮಿಕರು ಮತ್ತು ಅವರ ಅವಲಂಬಿತರು ಉದ್ಯೋಗಕ್ಕೆ ಪ್ರತಿನಿತ್ಯ ಬೆಂಗಳೂರಿಗೆ ಹೋಗುತ್ತಿದ್ದಾರೆ. ಅವರಿಗಾಗಿ ಈ ಭೂಮಿಯಲ್ಲಿ ಉದ್ಯಮ ಸ್ಥಾಪಿಸಬೇಕು ಎಂದೂ ಅವರು ಒತ್ತಾಯಿಸಿದರು.

‘ಚಿನ್ನದ ಗಣಿ ಪುನಶ್ಚೇತನ ತೀರ್ಮಾನವನ್ನು ರಾಜ್ಯಕ್ಕೆ ಬಿಡುತ್ತೇವೆ. ಕಾರ್ಮಿಕರಿಗೆ ಮನೆಗಳ ಸ್ವಾಧೀನ ಕೊಡುತ್ತೇವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು’ ಎಂದು ಅವರು ಆಗ್ರಹಿಸಿದರು. ‘ಚಿನ್ನದ ಗಣಿ ಲಾಭದಾಯಕವಾಗಿ ನಡೆಯಲಿದೆ. ಪ್ರತಿ ಟನ್‌ ಅದಿರಿನಲ್ಲಿ ಕನಿಷ್ಠ ನಾಲ್ಕೈದು ಗ್ರಾಂ ಚಿನ್ನ ದೊರೆಯಲಿದೆ’ ಎಂದು ಮುನಿಯಪ್ಪ ತಿಳಿಸಿದರು.

Write A Comment