ಮನೋರಂಜನೆ

1 ರನ್‌ನಿಂದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ರೋಚಕ ಜಯ ಗಳಿಸಿದ ಗುಜರಾತ್ ಲಯನ್ಸ್

Pinterest LinkedIn Tumblr

chris-morris

ನವದೆಹಲಿ: ಡೆಲ್ಲಿ ಡೇರ್‌ಡೆವಿಲ್ಸ್ ತಂಡ ದ ಕ್ರಿಸ್ ಮೊರಿಸ್ ಅವರ ವೀರಾವೇಷದ ಹೋರಾಟಕ್ಕೆ ಕೊನೆಗೂ ಜಯ ಸಿಗಲಿಲ್ಲ. ಡ್ವೇನ್ ಸ್ಮಿತ್ ಮತ್ತು ಬ್ರೆಂಡನ್ ಮೆಕ್ಲಮ್ ಅವರ ಜೊತೆಯಾಟಕ್ಕೆ ಗುಜರಾತ್ ಲಯನ್ಸ್ ಜಯಭೇರಿ ಬಾರಿಸಿತು.

ಬುಧವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವು 1 ರನ್‌ನಿಂದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ರೋಚಕ ಜಯ ಗಳಿಸಿತು.

ಟಾಸ್ ಗೆದ್ದ ಡೇರ್‌ಡೆವಿಲ್ಸ್ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಲಯನ್ಸ್ ತಂಡದ ಡ್ವೇನ್ ಸ್ಮಿತ್‌ ಮತ್ತು ಬ್ರೆಂಡನ್‌ ಮೆಕ್ಲಮ್ ಅವರ ಮೊದಲ ವಿಕೆಟ್ ಜೊತೆಯಾಟದಿಂದ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 172 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ಬೆನ್ನತ್ತಿದ ಆತಿಥೇಯ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 171 ರನ್‌ ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ ನಂತರ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಕ್ರಿಸ್ ಮೊರಿಸ್ (ಔಟಾಗದೆ 82; 32ಎ, 4ಬೌಂ, 8 ಸಿಕ್ಸರ್) ಮತ್ತು ಜೆ.ಪಿ. ಡುಮಿನಿ (48; 43ಎ, 3ಬೌಂ, 1ಸಿ) ಅವರ ಅಮೋಘ ಆಟ ರಂಗೇರಿತು.

ಕೊನೆಯ ಎಸೆತದವರೆಗೂ ಕ್ರಿಸ್ ಮಾಡಿದ ಹೋರಾಟಕ್ಕೆ ಗೆಲುವಿನ ಫಲ ಸಿಗಲಿಲ್ಲ. ಕೊನೆಯ ಓವರ್‌ನಲ್ಲಿ ಗೆಲ್ಲಲು 14 ರನ್‌ಗಳ ಅವಶ್ಯಕತೆ ಇತ್ತು. ಡ್ವೇನ್ ಬ್ರಾವೊ ಮಾಡಿದ ಚಾಣಾಕ್ಷತನದ ಬೌಲಿಂಗ್‌ ನಿಂದಾಗಿ ಡೆಲ್ಲಿ ತಂಡಕ್ಕೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ್ದ ಮೊರಿಸ್ ಭರವಸೆ ಮೂಡಿಸಿದ್ದರು.

ಆದರೆ, ನಂತರದ ಎಸೆತಗಳಲ್ಲಿ ಮೊರಿಸ್ ಮತ್ತು ಇನ್ನೊಂದೆಡೆ ಇದ್ದ ಪವನ್ ನೇಗಿಯನ್ನು ಒಂದು ಮತ್ತು ಎರಡು ರನ್‌ಗಳಿಗೆ ನಿಯಂತ್ರಿಸುವಲ್ಲಿ ಬ್ರಾವೊ ಯಶಸ್ವಿಯಾದರು. ಕೊನೆಯ ಎಸೆತದಲ್ಲಿ ಗೆಲ್ಲಲು ನಾಲ್ಕು ರನ್‌ಗಳ ಅಗತ್ಯವಿತ್ತು. ಆಗ ಬ್ರಾವೊ ಹಾಕಿದ ಯಾರ್ಕರ್ ಎಸೆತವನ್ನು ಬೌಂಡರಿಗೆ ಹೊಡೆಯುವ ಮೊರಿಸ್ ಪ್ರಯತ್ನ ವಿಫಲವಾಯಿತು. ಕೇವಲ ಎರಡು ರನ್ ಮಾತ್ರ ಪಡೆ ಯಬೇಕಾಯಿತು. ಮೊರಿಸ್ ಪಂದ್ಯಶ್ರೇಷ್ಠ ಗೌರವ ಪಡೆದರು. ಮೂರು ವಿಕೆಟ್ ಪಡೆದ ಲಯನ್ಸ್‌ನ ಧವಳ್ ಕುಲಕರ್ಣಿ ಮಿಂಚಿದರು.

ಸ್ಮಿತ್–ಮೆಕ್ಲಮ್ ಅಬ್ಬರ
ಸ್ಮಿತ್‌ ಮತ್ತು ಮೆಕ್ಲಮ್ ಅವರ ಅಬ್ಬರ ಮೊದಲ ಓವರ್‌ನಿಂದಲೇ ಶುರುವಾಯಿತು. ಒಟ್ಟು 30 ಎಸೆತಗಳನ್ನು ಎದುರಿಸಿದ ಸ್ಮಿತ್‌ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದಂತೆ 53 ರನ್ ಕಲೆ ಹಾಕಿದರು.

ಇವರ ಆಟಕ್ಕೆ ಉತ್ತಮ ಬೆಂಬಲ ನೀಡಿದ ಮೆಕ್ಲಮ್‌ ರನ್‌ ಹೊಳೆ ಹರಿಸಿದರು. ಡೆಲ್ಲಿ ತಂಡದ ಎಲ್ಲಾ ಬೌಲರ್‌ಗಳನ್ನು ದಂಡಿಸಿದ ಲಯನ್ಸ್ ಬ್ಯಾಟ್ಸ್‌ಮನ್‌ಗಳು ಮಿಂಚು ಹರಿಸಿದರು.

ಮೆಕ್ಲಮ್‌ 36 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದರು. ಇವರು ಒಟ್ಟು 60 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 112 ರನ್ ಕಲೆ ಹಾಕಿತು. ಇದಕ್ಕಾಗಿ ಇವರು ತೆಗೆದುಕೊಂಡಿದ್ದು 64 ಎಸೆತಗಳಷ್ಟೇ.

ಆರಂಭದಲ್ಲಿಯೇ ಇವರು ವೇಗವಾಗಿ ರನ್ ಕಲೆ ಹಾಕಿದ್ದರಿಂದ ನಂತರ ಬಂದ ಬ್ಯಾಟ್ಸ್‌ಮನ್‌ಗಳಿಗೆ ರನ್ ವೇಗವನ್ನು ಮತ್ತಷ್ಟು ಹೆಚ್ಚಿಸಲು ಅವಕಾಶವಿತ್ತು. ಆದರೆ ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್ ಸುರೇಶ್‌ ರೈನಾ ಎರಡು ರನ್ ಗಳಿಸಿದ್ದ ವೇಳೆ ವಿಕೆಟ್‌ ಒಪ್ಪಿಸಿದರು.

ದಿನೇಶ್ ಕಾರ್ತಿಕ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. 19 ರನ್ ಕಲೆ ಹಾಕಿದ್ದ ವೇಳೆ ಅವರು ಇಮ್ರಾನ್ ತಾಹಿರ್ ಬೌಲಿಂಗ್ ಮೋಡಿಯಲ್ಲಿ ಬಲಿಯಾದರು.

ರವೀಂದ್ರ ಜಡೇಜ ನಾಲ್ಕು ರನ್ ಗಳಿಸಿದರೆ, ಯುವ ಆಟ ಗಾರ ಈಶನ್‌ ಕಿಶನ್‌ ಬಾರಿಸಿದ್ದು ಎರಡು ರನ್ ಮಾತ್ರ.ಆದ್ದರಿಂದ ಲಯನ್ಸ್ ತಂಡದ ರನ್ ವೇಗ ಕೊನೆಯಲ್ಲಿ ಕುಸಿಯಿತು.

ಸ್ಕೋರ್‌ಕಾರ್ಡ್‌
ಗುಜರಾತ್‌ ಲಯನ್ಸ್‌ 6ಕ್ಕೆ 172 (20 ಓವರ್‌ಗಳಲ್ಲಿ)

ಡ್ವೇನ್‌ ಸ್ಮಿತ್‌ ಎಲ್‌ಬಿಡಬ್ಲ್ಯು ಬಿ. ಇಮ್ರಾನ್‌ ತಾಹಿರ್‌ 53
ಬ್ರೆಂಡನ್ ಮೆಕ್ಲಮ್‌ ಬಿ. ಕ್ರಿಸ್‌ ಮಾರಿಸ್‌ 60
ಸುರೇಶ್ ರೈನಾ ಸಿ. ಕರುಣ್ ನಾಯರ್ ಬಿ. ಕ್ರಿಸ್‌ ಮಾರಿಸ್‌ 02
ದಿನೇಶ್‌ ಕಾರ್ತಿಕ್‌ ಸಿ. ಡುಮಿನಿ ಬಿ. ಇಮ್ರಾನ್‌ ತಾಹೀರ್‌ 19
ರವೀಂದ್ರ ಜಡೇಜ ಸಿ. ಕ್ವಿಂಟನ್‌ ಡಿ ಕಾಕ್‌ ಬಿ. ಡುಮಿನಿ 04
ಈಶನ್‌ ಕಿಶನ್‌ ಸಿ. ಡುಮಿನಿ ಬಿ. ಇಮ್ರಾನ್ ತಾಹೀರ್ 02
ಡ್ವೇನ್‌ ಬ್ರಾವೊ ಔಟಾಗದೆ 07
ಜೇಮ್ಸ್‌ ಫಾಕ್ನರ್‌ ಔಟಾಗದೆ 22
ಇತರೆ: (ಲೆಗ್‌ ಬೈ–2, ವೈಡ್‌–1) 03
ವಿಕೆಟ್‌ ಪತನ: 1–112 (ಸ್ಮಿತ್‌; 10.4), 2–116 (ಬ್ರೆಂಡನ್‌; 11.2), 3–117 (ರೈನಾ; 11.6), 4–130 (ಜಡೇಜ; 14.3), 5–142 (ಈಶನ್‌; 16.4), 6–142 (ಕಾರ್ತಿಕ್‌; 16.5).
ಬೌಲಿಂಗ್‌: ಜಹೀರ್ ಖಾನ್‌ 4–0–48–0, ಶಹಬಜ್‌ ನದೀಮ್‌ 4–0–32–0, ಕ್ರಿಸ್‌ ಮಾರಿಸ್‌ 4–0–35–2, ಅಮಿತ್‌ ಮಿಶ್ರಾ 3–0–27–0, ಇಮ್ರಾನ್ ತಾಹೀರ್‌ 4–0–24–3, ಜೆ.ಪಿ ಡುಮಿನಿ 1–0–4–1.

ಡೆಲ್ಲಿ ಡೇರ್‌ಡೆವಿಲ್ಸ್‌ 5 ಕ್ಕೆ 171 (20 ಓವರ್‌ಗಳಲ್ಲಿ)

ಕ್ವಿಂಟನ್‌ ಡಿ ಕಾಕ್ ಸಿ. ಸುರೇಶ್‌ ರೈನಾ ಬಿ. ಧವಳ್‌ ಕುಲಕರ್ಣಿ 05
ಸಂಜು ಸ್ಯಾಮ್ಸನ್‌ ಸಿ. ಜೇಮ್ಸ್‌ ಫಾಕ್ನರ್‌ ಬಿ. ಧವಳ್‌ ಕುಲಕರ್ಣಿ 01
ಕರುಣ್ ನಾಯರ್ ಸಿ. ಪ್ರವೀಣ್‌ ತಾಂಬೆ ಬಿ. ಧವಳ್‌ ಕುಲಕರ್ಣಿ 09
ಜೆ.ಪಿ ಡುಮಿನಿ ಸಿ ಮತ್ತು ಬಿ. ಡ್ವೇನ್‌ ಬ್ರಾವೊ 48
ರಿಷಬ್ ಪಂಥ್‌ ಸಿ. ಪ್ರವೀಣ್ ಕುಮಾರ್ ಬಿ. ಜೇಮ್ಸ್ ಫಾಕ್ನರ್‌ 20
ಕ್ರಿಸ್‌ ಮೊರಿಸ್‌ ಔಟಾಗದೆ 82
ಪವನ್ ನೇಗಿ ಔಟಾಗದೆ 03
ಇತರೆ:(ಲೆಗ್‌ ಬೈ–2, ವೈಡ್‌್–1) 03
ವಿಕೆಟ್‌ ಪತನ: 1–2 (ಸ್ಯಾಮ್ಸನ್‌; 1.3), 2–12 (ಕ್ವಿಂಟನ್‌; 3.4), 3–16 (ಕರುಣ್‌; 3.6), 4–57 (ಪಂಥ್‌; 10.4), 5–144 (ಡುಮಿನಿ; 17.1).
ಬೌಲಿಂಗ್‌: ಪ್ರವೀಣ್‌ ಕುಮಾರ್ 4–0–13–0, ಧವಳ್‌ ಕುಲಕರ್ಣಿ 4–1–19–3, ಡ್ವೇನ್‌ ಬ್ರಾವೊ 4–0–40–1, ಸುರೇಶ್ ರೈನಾ 2–0–17–0, ಡ್ವೇನ್ ಸ್ಮಿತ್‌ 2–0–26–0, ಜೇಮ್ಸ್‌ ಫಾಕ್ನರ್‌ 2–0–23–1, ರವೀಂದ್ರ ಜಡೇಜ 1–0–14–0, ಪ್ರವೀಣ್‌ ತಾಂಬೆ 1–0–17–0.

ಫಲಿತಾಂಶ: ಗುಜರಾತ್‌ ಲಯನ್ಸ್‌ ತಂಡಕ್ಕೆ 1 ರನ್ ಜಯ.
ಪಂದ್ಯಶ್ರೇಷ್ಠ: ಕ್ರಿಸ್ ಮೊರಿಸ್ (ಡೆಲ್ಲಿ ಡೇರ್‌ಡೆವಿಲ್ಸ್)

Write A Comment