ರಾಷ್ಟ್ರೀಯ

ಮಲ್ಯ ಕುಟುಂಬದ ಆಸ್ತಿ ವಿವರ ಬ್ಯಾಂಕುಗಳಿಗೆ ನೀಡಿ: ಸುಪ್ರೀಂ ಕೋರ್ಟ್‌ ಸೂಚನೆ

Pinterest LinkedIn Tumblr

Supreme-ONEನವದೆಹಲಿ (ಪಿಟಿಐ): ಭಾರತ ಹಾಗೂ ವಿದೇಶಗಳಲ್ಲಿರುವ ತನ್ನ ಹಾಗೂ ಕುಟುಂಬ ಸದಸ್ಯರ ಆಸ್ತಿ ಬಹಿರಂಗದಿಂದ ಉದ್ಯಮಿ ವಿಜಯ್ ಮಲ್ಯ ಅವರಿಗೆ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

‘ಮಲ್ಯ, ಅವರ ಪತ್ನಿ, ಅವರ ಮಕ್ಕಳು ಬ್ಯಾಂಕುಗಳಿಗೆ ಆಸ್ತಿ ಬಹಿರಂಗ ಮಾಡಲು ಇರುವ ಸ್ಪಷ್ಟವಾದ ಆಕ್ಷೇಪಣೆ ಏನು ಎಂಬುದು ತಿಳಿಯುತ್ತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಹಾಗೂ ಆರ್‌.ಎಫ್‌.ನಾರಿಮನ್ ಅವರಿದ್ಧ ಪೀಠ ಅಭಿಪ್ರಾಯ ಪಟ್ಟಿತು.

ಅಲ್ಲದೇ, ಮಲ್ಯ ಹಾಗೂ ಅವರ ಕುಟುಂಬವು ಭಾರತ ಹಾಗೂ ವಿದೇಶದಲ್ಲಿರುವ ಆಸ್ತಿಗಳ ಕುರಿತು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವ ವಿವರಗಳನ್ನು ಬ್ಯಾಂಕುಗಳ ಒಕ್ಕೂಟಕ್ಕೆ ಒದಗಿಸುವಂತೆ ಸುಪ್ರೀಂಕೋರ್ಟ್‌ನ ರೆಜಿಸ್ಟ್ರಾರ್‌ಗೆ ಪೀಠ ನಿರ್ದೇಶನ ನೀಡಿತು.

ಇದೇ ವೇಳೆ, ಸಾಲ ಮರುಪಾವತಿ ಸಂಬಂಧ ಬ್ಯಾಂಕುಗಳು ಹಾಗೂ ಆರ್ಥಿಕ ಸಂಸ್ಥೆಗಳ ಅರ್ಜಿಗಳ ಕುರಿತು ‘ಎರಡು ತಿಂಗಳಲ್ಲಿ ತ್ವರಿತವಾಗಿ ನಿರ್ಧಾರ ಕೈಗೊಳ್ಳಿ’ ಎಂದು ಬೆಂಗಳೂರಿನಲ್ಲಿರುವ ಸಾಲ ವಸೂಲಿ ಮಂಡಳಿಗೆ ಅದು ಸೂಚಿಸಿದೆ.

ಇದಕ್ಕೂ ಮೊದಲು, ‘ಮಲ್ಯ ಅವರು ಭಾರತದ ನ್ಯಾಯಾಂಗದಿಂದ ತಲೆಮರಿಸಿಕೊಂಡಿದ್ದಾರೆ. ಅವರು ಕಣ್ಣಾಮುಚ್ಚಾಲೆ ಆಡುತ್ತಿದ್ದು, ಕಥೆಗಳನ್ನು ಕಟ್ಟುತ್ತಿದ್ದಾರೆ. ಸ್ವದೇಶಕ್ಕೆ ಮರಳುವ ಉದ್ದೇಶವಿಲ್ಲ ಎಂಬುದನ್ನು ಅವರು ಉದ್ದೇಶ ಪೂರ್ವಕವಾಗಿ ನ್ಯಾಯಾಲಯದಿಂದ ಮುಚ್ಚಿಡುತ್ತಿದ್ದಾರೆ’ ಎಂದು ಮಲ್ಯ ವಿರುದ್ಧ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರೋಪಿಸಿದರು.

ಈ ನಡುವೆ, ಮಲ್ಯ ಹಾಗೂ ಅವರ ಕಂಪೆನಿಗಳ ಪರವಾಗಿ ಹಾಜರಾಗಿದ್ದ ಸಿ.ಎಸ್.ವೈದ್ಯನಾಥನ್ ಹಾಗೂ ಪರಾಗ್ ತ್ರಿಪಾಠಿ, ‘ಮಲ್ಯ ಸುಸ್ತಿದಾರ. ಆದರೆ ಉದ್ದೇಶಪೂರ್ವಕ ಸುಸ್ತಿದಾರ ಅಲ್ಲ. ಇದು ವ್ಯಾಪಾರದಲ್ಲಿ ನಷ್ಟಕ್ಕೆ ಸಂಬಂಧಿಸಿದ ಪ್ರಕರಣ. ಅವರು ಉದ್ದೇಶಪೂರ್ವಕ ಸುಸ್ತಿದಾರರಲ್ಲ’ ಎಂದು ತಿಳಿಸಿದರು.

Write A Comment