ರಾಷ್ಟ್ರೀಯ

ಆಧಾರ್‌ ಕುರಿತ ಅರ್ಜಿಗೆ ಎ.ಜಿ ನೆರವು ಕೋರಿದ ಸುಪ್ರೀಂ

Pinterest LinkedIn Tumblr

Supreme-ONEನವದೆಹಲಿ (ಪಿಟಿಐ):ಆಧಾರ್‌ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಡಿಸಿ ಲೋಕಸಭೆಯಲ್ಲಿ ಅಂಗೀಕಾರ ಪಡೆದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಕಾಂಗ್ರೆಸ್‌ನ ಹಿರಿಯ ಮುಖಂಡ ಜೈರಾಂ ರಮೇಶ್ ಅವರು ಸಲ್ಲಿಸಿದ್ದ ಅರ್ಜಿ ಸಂಬಂಧ ನೆರವು ನೀಡುವಂತೆ ಅಟಾರ್ನಿ ಜನರಲ್ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ಆಧಾರ್‌ ಮಸೂದೆಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸೂಚಿಸಿದ್ದ ತಿದ್ದುಪಡಿಗಳನ್ನು ಕೈಬಿಟ್ಟಿದ್ದ ಕೇಂದ್ರ ಸರ್ಕಾರ, ಪ್ರಸಕ್ತ ಬಜೆಟ್‌ ಅಧಿವೇಶನದ ಮೊದಲ ಅವಧಿಯಲ್ಲಿ ಅದನ್ನು ಹಣಕಾಸು ಮಸೂದೆಯಾಗಿ ಮಂಡಿಸಿ ಅಂಗೀಕಾರ ಪಡೆದಿತ್ತು.

ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸುವಂತೆ ಜೈರಾಂ ಪರ ವಕೀಲರಾದ ಪಿ.ಚಿದಂಬರಂ ಅವರು ಕೋರಿದರು.

ಆಧಾರ್ ಮಸೂದೆಗೆ ಹಣಕಾಸು ಮಸೂದೆ ಸ್ಥಾನಮಾನ ನೀಡುವುದು ‘ಅಸಾಂವಿಧಾನಿಕ’ ಎಂದು ಕೇಂದ್ರದ ಮಾಜಿ ಸಚಿವರೂ ಆದ ಚಿದಂಬರಂ ವಾದಿಸಿದರು.

ಈ ವೇಳೆ, ‘ಈ ಸಂಬಂಧ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಅಭಿಪ್ರಾಯ ಹೇಳಬೇಕು’ ಎಂದು ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಪೀಠ ಹೇಳಿತು.

ನ್ಯಾಯಮೂರ್ತಿಗಳಾದ ಆರ್. ಬಾನುಮತಿ ಹಾಗೂ ಯು.ಯು.ಲಲಿತ್ ಅವರನ್ನೂ ಒಳಗೊಂಡಿದ್ದ ಪೀಠ, ಯಾವುದೇ ನೋಟಿಸ್‌ ಜಾರಿಗೊಳಿಸದೇ ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ನಿಗದಪಡಿಸಿತು.

ಆಧಾರ್‌ ಮಸೂದೆಯು ಮಾರ್ಚ್‌ 16ರಂದು ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು.

ಯಾವುದೇ ಹಣಕಾಸು ಮಸೂದೆಯು ರಾಜ್ಯಸಭೆ ಸೂಚಿಸಿದ ತಿದ್ದುಪಡಿ ಸಹಿತ/ರಹಿತವಾಗಿ ಲೋಕಸಭೆಯಲ್ಲಿ ಅಂಗೀಕಾರಗೊಂಡರೆ, ಅದು ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ಪಡೆಯದಂತೆಯೇ.

Write A Comment