ರಾಷ್ಟ್ರೀಯ

ವಿಜಯ್ ಮಲ್ಯ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗುವುದು: ಕೇಂದ್ರ

Pinterest LinkedIn Tumblr

mallya-7ನವದೆಹಲಿ: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಸಾಲದ ದೊರೆ ವಿಜಯ್ ಮಲ್ಯಯನ್ನು ಭಾರತಕ್ಕೆ ಕರೆತಂದು, ನ್ಯಾಯಾಂಗ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಶುಕ್ರವಾರ ಕೇಂದ್ರ ಸರ್ಕಾರ ಹೇಳಿದೆ.
ಲಂಡನ್ ನಲ್ಲಿರುವ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದ್ದು, ಗಡಿಪಾರು ಮನವಿಯೆನ್ನು ಪರಿಗಣಿಸಾಲಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ವಾಪಸ್ ಭಾರತಕ್ಕೆ ಕರೆತರಲು ಸರ್ಕಾರ ಬದ್ಧವಾಗಿದೆ. ನಾವು ನೀಡಿದ್ದ ಶೋಕಾಸ್ ನೋಟಿಸ್ ಗೆ ಅವರು ಪ್ರತಿಕ್ರಿಯಿಸಿದ್ದು, ಗಡಿಪಾರು ಪ್ರಕ್ರಿಯೆ ಆರಂಭಿಸುವ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮಲ್ಯ ಅವರ ವಿರುದ್ಧ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದ್ದು, ಅವರನ್ನು ಆ ದೇಶದಿಂದ ಗಡಿಪಾರು ಮಾಡಲು ಕ್ರಮಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿತ್ತು.
ಈ ಸಂಬಂಧ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿರುವ ಇಡಿ, ಮದ್ಯದ ದೊರೆಯ ವಿರುದ್ಧ ಗಡಿಪಾರು ಪ್ರಕ್ರಿಯೆಗಳನ್ನು ಆರಂಭಿಸುವಂತೆ ಕೇಳಿಕೊಂಡಿದೆ. ಅಲ್ಲದೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಸಿಬಿಐಗೆ ಶೀಘ್ರದಲ್ಲೇ ಪತ್ರ ಬರೆಯುವುದಾಗಿ ತಿಳಿಸಿದೆ.
ಕಳೆದ ವಾರವಷ್ಟೇ ವಿದೇಶಾಂಗ ಸಚಿವಾಲಯ ರಾಜ್ಯಸಭಾ ಸದಸ್ಯರೂ ಆಗಿರುವ ವಿಜಯ್ ಮಲ್ಯ ಅವರ ರಾಜ ತಾಂತ್ರಿಕ ಪಾಸ್ ಪೋರ್ಟ್ ಅನ್ನು ಅಮಾನತುಗೊಳಿಸಿತ್ತು.
ಐಡಿಬಿಐ ಬ್ಯಾಂಕ್ ನಿಂದ ಪಡೆದ 900 ಕೋಟಿ ರುಪಾಯಿ ಸಾಲವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮುಂದೆ ವಿಜಯ್ ಮಲ್ಯ ವಿಚಾರಣೆಗೆ ಹಾಜರಾಗಬೇಕಿದೆ.

Write A Comment