ಮನೋರಂಜನೆ

ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿದ ಸನ್‌ರೈಸರ್ಸ್‌; ರೈನಾ ಹೋರಾಟ ವ್ಯರ್ಥ

Pinterest LinkedIn Tumblr

warner-dhawan-2104

ರಾಜ್‌ಕೋಟ್ : ಮಧ್ಯಮವೇಗಿ ಭುವನೇಶ್ವರ್ ಕುಮಾರ್ (29ಕ್ಕೆ4) ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಸನ್‌ರೈಸರ್ಸ್‌ ತಂಡವು ಗುರುವಾರ ಭರ್ಜರಿ ಜಯ ಗಳಿಸಿತು.

ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದಿದ್ದ ಗುಜರಾತ್ ಲಯನ್ಸ್ ತಂಡವನ್ನು ಅದರ ತವರಿನ ಅಂಗಳದಲ್ಲಿಯೇ 10 ವಿಕೆಟ್‌ಗಳಿಂದ ಸೋಲಿಸಿದ ಸನ್‌ರೈಸರ್ಸ್‌ ಸಂಭ್ರಮಿಸಿತು. ಏಕಾಂಗಿ ಹೋರಾಟ ನಡೆಸಿದ ನಾಯಕ ಸುರೇಶ್ ರೈನಾ (75 ರನ್) ಅವರ ನೆರವಿನಿಂದ ಲಯನ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 135 ರನ್‌ಗಳನ್ನು ಗಳಿಸಿತ್ತು.

ಸನ್‌ರೈಸರ್ಸ್‌ನ ಆರಂಭಿಕ ಜೋಡಿ, ನಾಯಕ ಡೇವಿಡ್ ವಾರ್ನರ್ (ಔಟಾಗದೆ 74; 48ಎ, 5ಬೌಂ) ಮತ್ತು ಶಿಖರ್ ಧವನ್ (ಔಟಾಗದೆ 53, 41ಎ, 5ಬೌಂ) ಅವರು 14. 5 ಓವರ್‌ಗಳಲ್ಲಿ 137 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್ ತಂಡವು ತನ್ನ ಯೋಜನೆಯಲ್ಲಿ ಸಫಲವಾಯಿತು.

ಉತ್ತರಪ್ರದೇಶದ ಭುವನೇಶ್ವರ್ ತಮ್ಮ ಮೊದಲ ಓವರ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಅವರ ವಿಕೆಟ್ ಎಗರಿಸಿದರು. ಆಗ
ತಂಡದ ಖಾತೆಯಲ್ಲಿ ಒಂದೂ ರನ್ ಇರಲಿಲ್ಲ. ಕ್ರೀಸ್‌ಗೆ ಬಂದ ಸುರೇಶ್ ರೈನಾ ಮಾತ್ರ ಆತ್ಮವಿಶ್ವಾಸದಿಂದ ಬೌಲರ್‌ ಗಳನ್ನು ಎದುರಿಸಿದರು. ಆದರೆ, ಇನ್ನೊಂದು ಬದಿಯಲ್ಲಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಲಮ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು.

ಎಡಗೈ ಬ್ಯಾಟ್ಸ್‌ಮನ್ ರೈನಾ ಅವರ ಅಬ್ಬರವೇ ಹೆಚ್ಚಾಗಿತ್ತು. ಇದರಿಂದಾಗಿ ಕೇವಲ 35 ಎಸೆತಗಳಲ್ಲಿ ತಂಡದ ಮೊತ್ತವು 50ರ ಗಡಿ ದಾಟಿತು. ಒಂದೇ ರಾಜ್ಯದ ರೈನಾ ಮತ್ತು ಭುವಿ ನಡುವೆ ಹಣಾಹಣಿ ಏರ್ಪಟ್ಟಿತ್ತು. ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ದರು. ಅದರಲ್ಲಿ ಆರು ಬೌಂಡರಿಗಳು ಸೇರಿದ್ದವು. ಇದರಿಂದಾಗಿ ಲಯನ್ಸ್ ತಂಡವು ಬೃಹತ್ ಮೊತ್ತ ಪೇರಿಸುವ ಭರವಸೆ ಮೂಡಿತ್ತು.

ಆದರೆ, ಎಂಟನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಬಿಪುಲ್ ಶರ್ಮಾ ಅವರ ಎಸೆತದಲ್ಲಿ ಬ್ರೆಂಡನ್ ಮೆಕ್ಲಮ್ ಔಟಾದ ನಂತರ ಚಿತ್ರಣವೇ ಬದಲಾಯಿತು. ರೈನಾ ಏಕಾಂಗಿಯಾಗಿ ಹೋರಾಡುತ್ತಿದ್ದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ ರನ್‌ ಗಳಿಕೆಯ ವೇಗವು ಕಡಿಮೆಯಾಯಿತು.

ದಿನೇಶ್ ಕಾರ್ತಿಕ್ ಅವರು ದೀಪಕ್ ಹೂಡಾ ಎಸೆತದಲ್ಲಿ ಮತ್ತು ಡ್ವೇನ್ ಬ್ರಾವೊ ಅವರು ಬರೀಂದರ್ ಸರನ್ ಅವರ ಎಸೆತದಲ್ಲಿ ಭುವನೇಶ್ವರ ಕುಮಾರ್ ಪಡೆದ ಕ್ಯಾಚ್‌ಗಳಿಗೆ ನಿರ್ಗಮಿಸಿದರು. ನವವಿವಾಹಿತ ರವೀಂದ್ರ ಜಡೇಜ (14 ರನ್) ಸ್ವಲ್ಪ ಪ್ರತಿರೋಧ ಒಡಿದ್ದರು. ಅವರನ್ನು ಬಾಂಗ್ಲಾದ ಎಡಗೈ ವೇಗಿ ಮುಸ್ತಫಿಜರ್ ರಹಮಾನ್ ಕ್ಲೀನ್‌ಬೌಲ್ಡ್ ಮಾಡಿದರು.

ಇನಿಂಗ್ಸ್‌ನ ಕೊನೆಯ ಓವರ್‌ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಮೂರು ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. 51 ಎಸೆತಗಳಲ್ಲಿ 9 ಬೌಂಡರಿಗಳಿದ್ದ 75 ರನ್ ಗಳಿಸಿದ ರೈನಾ, ಆಕಾಶ್ ದೀಪ್ ನಾಥ್ ಮತ್ತು ಡೇಲ್ ಸ್ಟೇಯ್ನ್ ವಿಕೆಟ್‌ಗಳನ್ನು ಪಡೆದ ಭುವಿ ಮಿಂಚಿದರು. ಅವರಿಗೆ ಇನ್ನುಳಿದ ಬೌಲರ್‌ಗಳಿಂದಲೂ ಉತ್ತಮ ಬೆಂಬಲ ಸಿಕ್ಕಿತ್ತು. ಮುಸ್ತಫಿ ಜರ್ ರಹಮಾನ್ ನಾಲ್ಕು ಓವರ್ ಬೌಲಿಂಗ್ ಮಾಡಿ ಕೇವಲ 19 ರನ್ ನೀಡಿದರು. ಒಂದು ವಿಕೆಟ್ ಪಡೆದರು. ದೀಪಕ್ ಹೂಡಾ, ಬರೀಂದರ್, ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಅಬ್ಬರಿಸಿದ ವಾರ್ನರ್–ಧವನ್
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಸನ್‌ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ವಿಕೆಟ್‌ ಪತನಕ್ಕೆ ಅವಕಾಶವನ್ನೇ ನೀಡಲಿಲ್ಲ. ಇವರಿಬ್ಬರ ಅಬ್ಬರಕ್ಕೆ ಲಯನ್ಸ್‌ ಬಳಗದ ಬೌಲರ್‌ಗಳು ಸುಸ್ತಾದರು. ಪ್ರತಿ ಓವರ್‌ಗೆ 11 ರನ್‌ಗಳ ಸರಾಸರಿಯಲ್ಲಿ ರನ್‌ ಗಳಿಸಿದರು.

ಕಳೆದ ಮೂರು ಪಂದ್ಯಗಳಲ್ಲಿಯೂ ವೈಫಲ್ಯ ಅನುಭವಿಸಿದ್ದ ಶಿಖರ್ ಧವನ್ ಅಜೇಯ ಅರ್ಧಶತಕ ಗಳಿಸಿ ಫಾರ್ಮ್‌ಗೆ ಮರಳಿದರು. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿದ್ದ ಹೈದರಾಬಾದ್ ತಂಡವು ಸತತ ಎರಡನೇ ಗೆಲುವು ಸಾಧಿಸಿತು. ಲಯನ್ಸ್‌ ತಂಡವು ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.

Write A Comment