ರಾಷ್ಟ್ರೀಯ

ಅತ್ಯಾಚಾರಕ್ಕೆ ಯತ್ನಿಸಿದವನ ಗುಪ್ತಾಂಗವನ್ನು ಕತ್ತರಿಸಿ ಕೊಂದು ಹಾಕಿದ ಆದಿವಾಸಿ ಮಹಿಳೆ !

Pinterest LinkedIn Tumblr

rape1

ಗುವಾಹಟಿ: ಅತ್ಯಾಚಾರವೆಸಗಲು ಯತ್ನಿಸಿದ ಬುಡಕಟ್ಟು ಜನಾಂಗದ ಸಹ ನಿವಾಸಿಯೊಬ್ಬನ ಖಾಸಗಿ ಅಂಗವನ್ನು ಆದಿವಾಸಿ ಮಹಿಳೆ ಕತ್ತರಿಸಿ ಹಾಕಿ ಆತನ ಶರೀರವನ್ನು ಹತ್ತಿರದ ಸ್ಮಶಾನದಲ್ಲಿ ಸುಟ್ಟುಹಾಕಿದ ಘಟನೆ ಅಸ್ಸಾಂನ ಜಿಂಜಿಯಾ ಪ್ರದೇಶದ ಭರಜುಲಿ ಗ್ರಾಮದಲ್ಲಿ ನಡೆದಿದೆ.

ಘಟನೆ ಏಪ್ರಿಲ್ 4ರಂದು ನಡೆದಿದ್ದು ಮೊನ್ನೆ ಮಂಗಳವಾರ ಸಾಯಂಕಾಲ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು 30 ವರ್ಷದ ಕೃಷ್ಣ ಬೂಮ್ಜಿ ಎಂದು ಗುರುತಿಸಲಾಗಿದೆ. ಮಹಿಳೆ ಮತ್ತು ಆಕೆಯ ಪತಿಯನ್ನು ನಿನ್ನೆ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಯಿತು.

”ನಾವು ಮಹಿಳೆ ರೀಟಾ ಒರಂಗ್ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದೇವೆ. ಶವವನ್ನು ಸಾಗಿಸಿ ಸುಟ್ಟುಹಾಕಲು ಇತರ ಏಳು ಮಂದಿ ಮಹಿಳೆಯರು ಆಕೆಗೆ ಸಹಾಯ ಮಾಡಿದ್ದರು ಎಂದು ಸ್ಥಳೀಯ ಮಹಿಳೆಯರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬಿಸ್ವನಾಥ್ ಚಾರಿಯಲಿ ಪೊಲೀಸ್ ಸೂಪರಿಂಟೆಂಡ್ ಅಂಕುರ್ ಜೈನ್ ತಿಳಿಸಿದ್ದಾರೆ.

ಕೊಲೆಗೀಡಾದ ಕೃಷ್ಣನ ಕುಟುಂಬದವರು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಮೇಲೆ ತನಿಖೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಶವದ ಮೂಳೆಯನ್ನು ಹೊರತೆಗೆದ ಪೊಲೀಸರು ಶವಪರೀಕ್ಷೆಗೆ ಕಳುಹಿಸಿದ್ದಾರೆ.

”ಕೃಷ್ಣ ಒಬ್ಬ ಕುಖ್ಯಾತ ಅಪರಾಧಿ, ಆತನ ವಿರುದ್ಧ ಇನ್ನೆರಡು ಕೇಸುಗಳಲ್ಲಿ ಜಾಮೀನುರಹಿತ ಬಂಧನದ ವಾರಂಟ್ ಹೊರಡಿಸಲಾಗಿದ್ದು, ಆತ ಪೊಲೀಸರಿಂದ ತಪ್ಪಿಸಿಕೊಂಡಿದ್ದ.” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

”ಕೃಷ್ಣ ನನ್ನನ್ನು ಮತ್ತು ತನ್ನ ಮಗಳನ್ನು ಅತ್ಯಾಚಾರವೆಸಗಲು ಪ್ರಯತ್ನಿಸಿದ್ದ. ನಮ್ಮ ಮನೆಗೆ ಬಂದ ಆತ ಅತ್ಯಾಚಾರವೆಸಗಲು ಯತ್ನಿಸಿದ. ಕೂಡಲೇ ನನಗೆ ಕೆಳಗೆ ಇದ್ದ ಕೊಡಲಿ ಎತ್ತಿಕೊಳ್ಳಲು ಸಾಧ್ಯವಾಯಿತು. ಅವನನ್ನು ಎದುರಿಸುತ್ತೇನೆ ಎಂದು ಅರಿವಾದಾಗ ಓಡಿಹೋಗಲು ಯತ್ನಿಸಿದ. ಆದರೆ ನಾನು ಅವನನ್ನು ಅಟ್ಟಿಸಿಕೊಂಡು ಹೋಗಿ ಹೊಡೆದು ಹಾಕಿದೆ. ನೆಲದಲ್ಲಿ ಬಿದ್ದ ಆತ ಒದ್ದಾಡತೊಡಗಿದ. ಆದರೂ ಕೂಡ ಆತ ಶಕ್ತಿಮೀರಿ ನನ್ನ ಮೇಲೆ ಮತ್ತೆ ಎರಗಿಬೀಳಬಹುದು ಎಂಬ ಭಯದಿಂದ ಆತನ ಗುಪ್ತಾಂಗವನ್ನು ಕತ್ತರಿಸಿ ಹಾಕಿದೆ. ನಂತರ ಇತರ ಏಳು ಮಂದಿ ಮಹಿಳೆಯರ ಸಹಾಯದಿಂದ ಶವವನ್ನು ಸುಟ್ಟುಹಾಕಿದೆ’ ಎಂದು ಘಟನೆಯ ಸಂಪೂರ್ಣ ವಿವರವನ್ನು ಮಹಿಳೆ ಸುದ್ದಿಗಾರರಿಗೆ ತಿಳಿಸಿದ್ದಾಳೆ.

Write A Comment