ರಾಷ್ಟ್ರೀಯ

ಶೌಚಾಲಯ ನಿರ್ಮಿಸುವುದಾಗಿ ಹೇಳಿ ಕೈಕೊಟ್ಟ ವರ: ವರನನ್ನೇ ಬದಲಿಸಿದ ವಧು

Pinterest LinkedIn Tumblr

vadu

ಕಾನ್ಪುರ: ಶೌಚಾಲಯ ಕಟ್ಟಿಸಿಕೊಡುವುದಾಗಿ ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದ ವರನೊಬ್ಬ ಮದುವೆ ಹತ್ತಿರ ಬರುತ್ತಿದ್ದಂತೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಮಹಿಳೆಯೊಬ್ಬಳು ವರನನ್ನೇ ಬದಲಿಸಿರುವ ಘಟನೆಯೊಂದು ನಡೆದಿದೆ.

ನೇಹಾ ವರನನ್ನು ಬದಲಿಸಿದ ವಧುವಾಗಿದ್ದು, ಈಕೆಗೆ ಗ್ರಾಮದಲ್ಲಿ ಸರ್ಕಾರೇತರವಲ್ಲದ ಸಂಸ್ಥೆಯೊಂದು ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆ ಮಾಡಲು ಆಕೆಯ ಕುಟುಂಬಸ್ಥರು ತೀರ್ಮಾನಿಸಿದ್ದರು. ಇದರಂತೆ ಕುಟುಂಬಸ್ಥರು ಯುವಕನನ್ನು ಹುಡುಕಿದ್ದರು.

ನೇಹಾಗೆ ಮದುವೆ ಗೊತ್ತಾದ ಬಳಿಕ ವರನ ಮನೆಯಲ್ಲಿ ಶೌಚಾಲಯ ಗೃಹವಿಲ್ಲ ಎಂಬ ವಿಷಯ ತಿಳಿದಿದೆ. ಹೀಗಾಗಿ ವರನ ಬಳಿ ಶೌಚಾಲಯ ಕಟ್ಟಿಸುವಂತೆ ತಿಳಿಸಿದ್ದಾಳೆ. ಇದರಂತೆ ಭಾವಿ ಪತ್ನಿಯ ಬೇಡಿಕೆಯನ್ನು ಈಡೇರಿಸುವುದಾಗಿ ವರ ಒಪ್ಪಿಕೊಂಡಿದ್ದಾನೆ.

ಆದರೆ, ಮದುವೆ ಹತ್ತಿರ ಬರುತ್ತಿದ್ದಂತೆ ವಧುವಿಗೆ ನೀಡಿದ್ದ ಮಾತನ್ನು ತಪ್ಪಿದ್ದಾನೆ. ಹೀಗಾಗಿ ಬೇಸರಗೊಂಡ ನೇಹಾ ಮದುವೆಗೆ ಇನ್ನು ನಾಲ್ಕು ದಿನವಿರುವಾಗಲೇ ವರನನ್ನು ಬದಲಿಸುವಂತೆ ಪೋಷಕರ ಬಳಿ ಪಟ್ಟು ಹಿಡಿದಿದ್ದಾಳೆ. ಮಗಳ ಈ ಹೇಳಿಕೆಯನ್ನು ಕೇಳಿ ತಬ್ಬಿಬ್ಬಾದ ಪೋಷಕರು ಕೊನೆಗೂ ಮನೆಯಲ್ಲಿ ಶೌಚಾಲಯವಿರುವ ಯುವಕನನ್ನು ನೋಡಿ ಮದುವೆ ಮಾಡಿಸಿದ್ದು, ನೇಹಾ ಇದೀಗ ಸರ್ವೇಶ್ ಎಂಬ ಯುವಕನೊಂದಿಗೆ ಸಪ್ತಪದಿ ತುಳಿದಿದ್ದಾಳೆ.

ಇನ್ನು ಈ ಕುರಿತಂತೆ ಮಾತನಾಡಿರುವ ನೇಹಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡಿದ್ದೇನೆ. ಇಂದು ಪ್ರತಿಯೊಂದು ಸ್ಥಳದಲ್ಲಿ ಹಾಗೂ ಹಳ್ಳಿಗಳಲ್ಲೂ ಶೌಚಾಲಯ ಅಗತ್ಯವಿದೆ. ಸ್ವತಃ ಪ್ರಧಾನಮಂತ್ರಿಯವರೇ ಈ ನೇತೃತ್ವವಹಿಸಿರುವಾಗ, ಸಾರ್ವಜನಿಕರು ಇದಕ್ಕೆ ಕೈ ಜೋಡಿಸಬೇಕು ಎಂದು ಹೇಳಿದ್ದಾಳೆ.

ಮದುವೆಗೆ ಕೇವಲ 4 ದಿನಗಳಷ್ಟೇ ಬಾಕಿಯಿತ್ತು. ಮದುವೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ನೇಹಾ ಇದ್ದಕ್ಕಿದ್ದಂತೆ ವರನನ್ನು ಬದಲಿಸುವಂತೆ ಪಟ್ಟು ಹಿಡಿದಳು. ಮದುವೆಯ ಆಮಂತ್ರಣ ಪತ್ರಿಕೆಯನ್ನು ಎಲ್ಲರಿಗೂ ಹಂಚಿಕೆ ಮಾಡಲಾಗಿತ್ತು. ಈ ಸಮಯದಲ್ಲಿ ಆಕೆಯ ಮಾತು ಕೇಳಿ ಸಾಕಷ್ಟು ಆಘಾತವಾಯಿತು.

ಆದರೂ ಇದು ನಮಗೆ ಹೆಮ್ಮೆ ಸಂಗತಿ ಎನಿಸಿತು. ನಂತರ ಸಮಯ ವ್ಯರ್ಥ ಮಾಡದೆ ಶೌಚಾಲಯವಿರುವ 5 ಹುಡುಗರನ್ನು ಆಯ್ಕೆ ಮಾಡಲಾಯಿತು. ಈ ಐವರು ಯುವಕರಲ್ಲಿ ನೇಹಾ ಸರ್ವೇಶ್ ನನ್ನು ಆಯ್ಕೆ ಮಾಡಿಕೊಂಡಳು. ನಂತರ ಸರ್ವೇಶ್ ನೊಂದಿಗೆ ಮದುವೆ ಮಾಡಿಸಲಾಯಿತು ಎಂದು ಸಾಮೂಹಿಕ ಮದುವೆ ಆಯೋಜನೆ ಮಾಡಿದ್ದ ಆಯೋಜಕರು ಹೇಳಿದ್ದಾರೆ.

Write A Comment