ರಾಷ್ಟ್ರೀಯ

ಮುಸ್ಲಿಂ ಮಹಿಳೆಯರ ಬಗ್ಗೆ ಸಾಕ್ಷಿ ಮಹಾರಾಜ್‌ ಏನು ಹೇಳಿದ್ದಾರೆ ಗೊತ್ತಾ?

Pinterest LinkedIn Tumblr

sakshiನವದೆಹಲಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಬಿಜೆಪಿ ಸಾಕ್ಷಿ ಮಹಾರಾಜ್ ಅವರು ಈ ಬಾರಿ, ಇಸ್ಲಾಂ ಧರ್ಮದಲ್ಲಿ ಮಹಿಳೆಯರನ್ನು ಕಾಲಿನ ಚಪ್ಪಲಿಯಂತೆ ಕಾಣಲಾಗುತ್ತದೆ ಎಂದು ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರು ನಮ್ಮ ತಾಯಿ ಹಾಗೂ ಸಹೋದರಿಯರು ಇದ್ದಂತೆ. ಆದರೆ ಇಸ್ಲಾಂ ಧರ್ಮದಲ್ಲಿ ಅವರನ್ನು ಚಪ್ಪಲಿಯಂತೆ ಕಾಣಲಾಗುತ್ತದೆ. ಅಗತ್ಯವಿದ್ದಾಗ ಕಾಲಿಗೆ ಹಾಕಿಕೊಂಡು ಅಗತ್ಯವಿಲ್ಲದಿದ್ದಾಗ ಎತ್ತಿ ಹೊರಗೆಸೆಯುವಂತೆ ಮುಸ್ಲಿಂ ಮಹಿಳೆಯರನ್ನು ನಡೆಸಿಕೊಳ್ಳಲಾಗುತ್ತಿದೆ. (ಪೈರೋಂಕೀ ಜೂತಿ; ಜಬ್‌ ಝರೂರತ್‌ ಪಡೇ ತೋ ಪೆಹನ್‌ಲೋ, ನಹೀ ತೋ ಉಠಾಕರ್‌ ಬಾಹರ್‌ ಫೇಂಕ್‌ ದೋ) ಎಂದಿದ್ದಾರೆ.
ಮುಸ್ಲಿಂ ಮಹಿಳೆಯರು ಸಹ ಶೋಷಣೆ, ಅನ್ಯಾಯ, ಅಧರ್ಮವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಂಗ ಹೇಗೆ ಹಿಂದೂ ಧರ್ಮದಲ್ಲಿ ಹಸ್ತಕ್ಷೇಪ ನಡೆಸುತ್ತದೆಯೇ ಹಾಗೆಯೇ ಅದು ಇಸ್ಲಾಂ ಧರ್ಮದಲ್ಲಿ ಹಸ್ತಕ್ಷೇಪ ನಡೆಸಿ, ಮುಸ್ಲಿಂ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ಅಸಮಾನತೆ ಇತ್ಯಾದಿಗಳನ್ನು ನಿವಾರಿಸಬೇಕು. ಅವರಿಗೂ ನಮಾಜ್‌ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾಕ್ಷಿ ಮಹಾರಾಜ್‌ ಹೇಳಿದ್ದಾರೆ.
ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಹಕ್ಕುಗಳಿವೆ. ದೇಶವು ಸಂವಿಧಾನದ ಪ್ರಕಾರ ನಡೆಯಬೇಕೇ ಹೊರತು ಫ‌ತ್ವಾಗಳ ಪ್ರಕಾರ ಅಲ್ಲ. ಇದನ್ನು ಸರ್ಕಾರ ಮತ್ತು ನ್ಯಾಯಾಂಗ ಖಾತರಿಪಡಿಸಬೇಕು ಎಂದು ಸಾಕ್ಷಿ ಮಹಾರಾಜ್‌ ಆಗ್ರಹಿಸಿದ್ದಾರೆ.
ದೇಶದ ಪ್ರಸಿದ್ಧ ಹಾಗೂ ಪ್ರಾಚೀನ ಹಿಂದೂ ದೇವಸ್ಥಾನಗಳಲ್ಲಿರುವ ಲಿಂಗ ಅಸಮಾನತೆಯ ಬಗ್ಗೆ ಭಾರೀ ದೊಡ್ಡ ಚರ್ಚೆ, ವಾದ – ವಿವಾದಗಳು ನಡೆಯುತ್ತಿವೆ. ಹಿಂದೂ ಆರಾಧನಾ ಸ್ಥಳಗಳಲ್ಲಿ ಪುರುಷರಿಗೆ ಪ್ರವೇಶಾವಕಾಶ ಇರುವಂತೆ ಮಹಿಳೆಯರಿಗೂ ನೀಡಬೇಕು; ಅದು ಸಂವಿಧಾನದತ್ತ ಲಿಂಗಸಮಾನತೆಯ ಹಕ್ಕು ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಅದೇ ಪ್ರಕಾರ ಮುಸ್ಲಿಂ ಮಹಿಳೆಯರಿಗೂ ಲಿಂಗ ಸಮಾನತೆಯ ಹಕ್ಕನ್ನು ಸರ್ಕಾರ ಮತ್ತು ನ್ಯಾಯಾಂಗ ಕಲ್ಪಿಸಿಕೊಡಬೇಕು ಮತ್ತು ಆ ಮೂಲಕ ಅವರ ಶೋಷಣೆ, ದೌರ್ಜನ್ಯ ಇತ್ಯಾದಿಗಳನ್ನು ನಿವಾರಿಸಬೇಕು ಎಂದು ಬಿಜೆಪಿ ಸಂಸದ ಒತ್ತಾಯಿಸಿದ್ದಾರೆ.

Write A Comment