ರಾಷ್ಟ್ರೀಯ

ಕೇರಳದ ದೇವಸ್ಥಾನದಲ್ಲಿ ಪಟಾಕಿ ಸಿಡಿದು ಅಗ್ನಿ ಅವಘಡ : 84ಕ್ಕೂ ಹೆಚ್ಚು ಭಕ್ತರ ಸಾವು-200ಕ್ಕೂ ಹೆಚ್ಚು ಭಕ್ತರು ಗಾಯ

Pinterest LinkedIn Tumblr

KERALA

ಕೊಚ್ಚಿ: ಕೇರಳದ ಕೊಲ್ಲಂ ಜಿಲ್ಲೆಯ ಪಾರವೂರ್ ಮೂಕಾಂಬಿಕಾ ದೇವಾಲಯದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪಟಾಕಿ ಸಿಡಿದು ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 84ಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ.

ಶನಿವಾರ ಮಧ್ಯರಾತ್ರಿ 1.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ವಾರ್ಷಿಕೋತ್ಸವದ ಸಂಭ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ವೇಳೆ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಆಕಾಶದಲ್ಲಿ ಸಿಡಿಯಬೇಕಾದ ಬಾಣಬಿರುಸುಗಳು ನೆಲದಲ್ಲಿಯೇ ಸಿಡಿದಿದ್ದು, ದೊಡ್ಡ ಮಟ್ಟದ ಅನಾಹುತ ನಡೆದಿದೆ.

ದೇವಸ್ಥಾನದ ಕಂಬ ಸ್ಫೋಟ: ಒಮ್ಮೆಲೆ ನೆಲದಲ್ಲಿ ಪಟಾಕಿ ಸಿಡಿದಿದ್ದರಿಂದ ಅಗ್ನಿ ಅವಘಡ ಸಂಭವಿಸಿ ಕೆಲವರು ಸಾವನ್ನಪ್ಪಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಭಕ್ತರು ದಿಕ್ಕಾಪಾಲಾಗಿ ಓಡಿದ್ದರಿಂದ ನೂಕು ನುಗ್ಗಲು ಸಂಭವಿಸಿ ಕೆಲವು ಮಂದಿ ಸಾವನ್ನಪ್ಪಿದ್ದಾರೆ. ಇತ್ತ ಪಟಾಕಿ ಸಿಡಿದ ತೀವ್ರತೆಗೆ ದೇವಸ್ಥಾನದ ಐತಿಹಾಸಿಕ ಕಂಬ ಸ್ಫೋಟ ಗೊಂಡಿದ್ದು, ಇದರಡಿ ಸಿಲುಕಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಪಟಾಕಿ ಸ್ಫೋಟದ ಶಬ್ಧ ಸುಮಾರಿಗೆ ಒಂದೂವರೆ ಕಿಮೀ.ನವರೆಗೂ ಕೇಳಿಸಿದೆ.

ನ್ಯಾಯಾಂಗ ತನಿಖೆಗೆ ಆದೇಶ: ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆಯೆಂದು ಹೇಳಲಾಗಿದ್ದು, ಗಾಯಾಳುಗಳನ್ನು ಕೊಲ್ಲಂನ ಜಿಲ್ಲಾಸ್ಪತ್ರೆ ಸೇರಿದಂತೆ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸದ್ಯ ಈ ದುರ್ಘಟನೆ ಬಗ್ಗೆ ಕೇರಳ ಮುಖ್ಯಮಂತ್ರಿ ಊಮನ್ ಚಾಂಡಿ ಆಘಾತ ವ್ಯಕ್ತಪಡಿಸಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ಇದಲ್ಲದೇ ದೇವಸ್ಥಾನದ ಒಳಗಡೆ ಶವಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಗೃಹ ಸಚಿವ ರಮೇಶ್ ಚೆನ್ನಿತ್ತಲ, ಸಿಎಂ ಉಮ್ಮನ್ ಚಾಂಡಿ ದುರಂತದ ಮಾಹಿತಿ ಪಡೆದಿದ್ದಾರೆ.

ಕನ್ನಡಿಗರ ಮಾಹಿತಿ: ಈ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ ಭಕ್ತರ ಬಗ್ಗೆ ಕರ್ನಾಟಕ ಪೊಲೀಸರು ಮಾಹಿತಿ ಪಡೆದಿದ್ದಾರೆ. ಕರ್ನಾಟಕದ ಭಕ್ತರು ದೇವಸ್ಥಾನದ ಬಳಿ ಇದ್ದಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದು, ಸಹಾಯವಾಣಿಯನ್ನು ಕೂಡಾ ಆರಂಭಿಸಲಾಗಿದೆ.

Write A Comment