ರಾಷ್ಟ್ರೀಯ

ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮುಫ್ತಿ ಪ್ರಮಾಣ, ಬಿಜೆಪಿಗೆ ಹೆಚ್ಚು ಸಚಿವ ಸ್ಥಾನ

Pinterest LinkedIn Tumblr

Mehbooba

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ಪಿಡಿಪಿ ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರದ 22 ಸಚಿವರೊಂದಿಗೆ ಮೆಹಬೂಬ ಮುಫ್ತಿ ಅವರು ಇಂದು ಕಣಿವೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಂಡರು. 56 ವರ್ಷದ ಮುಫ್ತಿ ಅವರಿಗೆ ರಾಜ್ಯಪಾಲ ಎನ್ .ಎನ್. ವೊಹ್ರಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಮತ್ತೆ ಪಿಡಿಪಿ-ಬಿಜೆಪಿ ಸರ್ಕಾರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಮೆಹಬೂಬ ಮುಫ್ತಿ ಸಂಪುಟದಲ್ಲಿ ಈ ಬಾರಿ ಬಿಜೆಪಿಗೆ ಹೆಚ್ಚು ಸಚಿವ ಸ್ಥಾನಗಳು ಸಿಕ್ಕಿವೆ. ಬಿಜೆಪಿಗೆ 8 ಸಂಪುಟ ದರ್ಜೆ ಹಾಗೂ ಮೂರು ರಾಜ್ಯ ಸಚಿವ ಸ್ಥಾನಗಳನ್ನು ನೀಡಲಾಗಿದೆ. ಕಳೆದ ಬಾರಿ ಬಿಜೆಪಿಗೆ 6 ಸಂಪುಟ ದರ್ಜೆ ಸ್ಥಾನಗಳನ್ನು ನೀಡಲಾಗಿತ್ತು. ಇನ್ನು ಪಿಡಿಪಿ ಈ ಬಾರಿ 11ರ ಬದಲು 9 ಸಂಪುಟ ದರ್ಜೆ ಸಚಿವರನ್ನು ಹೊಂದಿದೆ.

ಇನ್ನು ಮೆಹಬೂಬ ಮುಫ್ತಿ ಅವರ ತಂದೆ ಮುಫ್ತಿ ಮೊಹಮ್ಮದ ಸಯೀದ್‌ ಅವರ ಸರ್ಕಾದಲ್ಲಿ ಸಚಿವರಾಗಿದ್ದ ಅಲ್ತಫ್ ಭುಕಾರಿ ಹಾಗೂ ಜಾವೇದ್ ಮುಸ್ತಫ್ ಅವರನ್ನು ಈ ಬಾರಿ ಸಂಪುಟದಿಂದ ಕೈಬಿಡಲಾಗಿದೆ.

ಕಳೆದ ಜನವರಿಯಲ್ಲಿ ಮುಫ್ತಿ ಮೊಹಮ್ಮದ ಸಯೀದ್‌ ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದರು. ಬಳಿಕ ಮೂರು ತಿಂಗಳ ಕಾಲ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿತ್ತು.

Write A Comment